ಧಾರವಾಡ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ) ಉದ್ಘಾಟನೆ ಮತ್ತು ಲೋಕಾರ್ಪಣೆಯನ್ನು ಸೆ.26 ರಂದು ಮಧ್ಯಾಹ್ನ 3 ಗಂಟೆಗೆ ಸತ್ತೂರು ಬಳಿಯ ಹೊಸ ಕ್ಯಾಂಪಸ್‍ನಲ್ಲಿ ಆಯೋಜಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಧಾರವಾಡದಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಸಾರ್ವಜನಿಕ ಖಾಸಗಿ-ಕೈಗಾರಿಕಾ ಪಾಲುದಾರಿಕೆಯ ಮಾದರಿಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೈಗಾರಿಕಾ ಸಂಸ್ಥೆಯಾದ ಕಿಯೋನಿಕ್ಸ್ ಇವುಗಳ ಸಹಭಾಗಿತ್ವದೊಂದಿಗೆ 2015 ರಲ್ಲಿ ಅಸ್ತಿತ್ವಕ್ಕೆ ಬಂತು. ದೇಶದಲ್ಲಿ ಮಾಹಿತಿ ತಂತ್ರಜ್ಞಾನ, ಉನ್ನತ ಶಿಕ್ಷಣ, ವೃತ್ತಿಪರ ಪರಿಣತಿ ಮತ್ತು ಕೌಶಲ್ಯವನ್ನು ಹೆಚ್ಚಿಸುವ ಉದ್ದೇಶಕ್ಕೆ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. 2017ರಲ್ಲಿ ಸಂಸತ್ತಿನ 23ನೇ ಕಾಯ್ದೆಯಡಿಯಲ್ಲಿ ಈ ಸಂಸ್ಥೆಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯೆಂದು ಘೋಷಿಸಲಾಗಿದೆ.
ಶೈಕ್ಷಣಿಕ ನಗರಿ ಎಂದೇ ಪ್ರಸಿದ್ಧಿ: ಹೊಸ ಹುರುಪಿನಲ್ಲಿ ಆರಂಭವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಧಾರವಾಡಕ್ಕೆ ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ, ಶೈಕ್ಷಣಿಕ ಮತ್ತು ಸಂಶೋಧನಾ ಸಮುದಾಯಕ್ಕೆ ಬದಲಾವಣೆ ತರುವಂತಹ ಅಪರೂಪದ ಅವಕಾಶವನ್ನು ಹೊಂದಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರವು ಈಗಾಗಲೇ ಉತ್ತರ ಕರ್ನಾಟಕದಲ್ಲಿ ತಾಂತ್ರಿಕ, ಕೃಷಿ, ವೈದ್ಯಕೀಯ, ಕಾನೂನು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಉತ್ಕೃಷ್ಟ ಶೈಕ್ಷಣಿಕ ಸಂಸ್ಥೆಯನ್ನು ಹೊಂದಿದ್ದು, 'ಶೈಕ್ಷಣಿಕ ನಗರಿ' ಎಂದು ಪ್ರಸಿದ್ಧಿ ಪಡೆದಿದೆ. 117 ಕೋಟಿ ರೂ. ವೆಚ್ಚದಲ್ಲಿ 60 ಎಕರೆ ಪ್ರದೇಶದಲ್ಲಿ ಐಐಐಟಿಯ ನೂತನ ಭವ್ಯ ಕಟ್ಟಡ ನಿರ್ಮಾಣಗೊಂಡಿದೆ.
ಸಾವಿರ ವಿದ್ಯಾರ್ಥಿಗಳನ್ನು ಹೊಂದುವ ಅಪೇಕ್ಷೆ: ಪರಿಸರ ಸ್ನೇಹಿ ವಾತಾವರಣದೊಂದಿಗೆ, ಬೆಂಗಳೂರಿಗೂ ಹತ್ತಿರವಾಗಿದ್ದು ಐಐಐಟಿ ಧಾರವಾಡ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಬೆಳೆಯುತ್ತಿದೆ. ಹಿಂದಿನ ಶೈಕ್ಷಣಿಕ ವರ್ಷದಲ್ಲಿ 834 ವಿದ್ಯಾರ್ಥಿಗಳಿದ್ದರು. ಈ ವರ್ಷದ ಪ್ರವೇಶಾತಿ ಕೊನೆಯಲ್ಲಿ 1000 ವಿದ್ಯಾರ್ಥಿಗಳನ್ನು ಹೊಂದುವ ನಿರೀಕ್ಷೆ ಇದೆ. ಪ್ರಸ್ತುತ ಭಾರತ ಮತ್ತು ಹೊರ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಂದ ಪಿಹೆಚ್ಡಿ, ಪೆಸ್ಟ್ ಡಾಕ್ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದಿರುವ 36 ಅಧ್ಯಾಪಕರನ್ನು ಈ ಧಾರವಾಡ ಐಐಐಟಿ ಹೊಂದಿದೆ.
ಇಲ್ಲಿ ಮಾಹಿತಿ ತಂತ್ರಜ್ಞಾನದ ಕೆಲವು ಆಯಾಮಗಳಲ್ಲಿ, ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಹಯೋಗದಲ್ಲಿ ವಿದ್ಯಾರ್ಥಿಗಳು ಸಂಶೋಧನೆಯನ್ನು ಕೈಗೊಳ್ಳುತ್ತಿದ್ದಾರೆ. ಸಂಸ್ಥೆಯಲ್ಲಿ 29 ಬೋಧಕೇತರ ಸಿಬ್ಬಂದಿಯಿದ್ದಾರೆ. 4ನೇ ಸರದಿಯಲ್ಲಿ ತೇರ್ಗಡೆಗೊಳ್ಳುತ್ತಿರುವವರ ಮಕ್ಕಳ ಕ್ಯುಮಿಲೇಟಿವ್ ಸರಾಸರಿ 7.0 ಇದೆ ಹಾಗೂ ಆಸಕ್ತಿಯಿರುವ ಮಕ್ಕಳಲ್ಲಿ ಶೇ.100 ರಷ್ಟು ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು, ಕೈಗಾರಿಕಾ ಪಾಲುದಾರರಾದ ಕಿಯಾನಿಕ್ಸ್, ಇನ್ಫೋಸಿಸ್‍ನ ಪ್ರತಿನಿಧಿಗಳು, ಕಾಲೇಜಿನ ಬೋರ್ಡ್ ಆಫ್ ಗವರ್ನರ್ಸ್, ಸೆನಟ್, ಹಣಕಾಸು ಸಮಿತಿ, ಕಟ್ಟಡ ಮತ್ತು ಕಾಮಗಾರಿ ಸಮಿತಿಯವರು, ಪ್ರತಿಷ್ಠಿತ ಸಂಸ್ಥೆಗಳ ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಇದನ್ನೂ ಓದಿ: ಐಐಐಟಿ ಧಾರವಾಡಕ್ಕೆ ರಾಷ್ಟ್ರಪತಿ ಭೇಟಿ: ಬುಡಕಟ್ಟು ಆದಿವಾಸಿಗಳಿಗಾಗಿ ರೋಬೋಟ್ ಸಂಶೋಧನೆ