ಹುಬ್ಬಳ್ಳಿ: ಅವಳಿ ಮಹಾನಗರ ಪಾಲಿಕೆ ಮೇಯರ್,ಉಪಮೇಯರ್ ಆಯ್ಕೆಗೆ 21ನೇ ಅವಧಿಯ ಮೀಸಲಾತಿಯನ್ನೇ ಸರ್ಕಾರ ಫೈನಲ್ ಮಾಡಿದ್ದೇ ತಡ ಎರಡು ಸ್ಥಾನಕ್ಕೆ (ಮೇಯರ್, ಉಪಮೇಯರ್)ತೀವ್ರ ಪೈಪೋಟಿ ಶುರುವಾಗಿದೆ.
ಕ್ಷೇತ್ರಗಳ ವಿಂಗಡನೆಯಾದ ನಂತರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 39 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲದೇ ಪಕ್ಷೇತರರು ಬೆಂಬಲ ಸೂಚಿಸಿದ ಕಾರಣ ಬಿಜೆಪಿ ಅಧಿಕಾರ ಹಿಡಿಯುವುದರಲ್ಲಿ ಅನುಮಾನ ಉಳಿದಿಲ್ಲ. ಹೀಗಾಗಿ ಮೇಯರ್ ಯಾರು ಆಗ್ತಾರೆಂಬ ಚರ್ಚೆಗಳು ಆರಂಭಗೊಂಡಿವೆ.
ಮೇಯರ್ ಸ್ಥಾನವೂ ಸಾಮಾನ್ಯ ವರ್ಗಕ್ಕೆ ಮೀಸಲಿರುವುದರಿಂದ ಈ ಬಾರಿ ಮಾಜಿ ಉಪಮೇಯರ್ ಹಾಗೂ 28 ನೇ ವಾರ್ಡಿನಿಂದ ಜಯಭೇರಿ ಬಾರಿಸಿರುವ ಚಂದ್ರಶೇಖರ ಮನಗುಂಡಿ ಮತ್ತೊಮ್ಮೆ ಮುಂದಿನ ಮೇಯರ್ ಆಗುತ್ತಾರೆಂಬ ಮಾತುಗಳು ಕೇಳಿ ಬರಲಾರಂಭಿಸಿವೆ. ಇದಲ್ಲದೆ ಈ ಬಾರಿ ಧಾರವಾಡದವರಿಗೆ ಮೇಯರ್ ಸ್ಥಾನ ಕೊಡಬೇಕೆಂಬ ಮಾತು ಕೂಡಾ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ 3ನೇ ವಾರ್ಡ್ನ ವಿರೇಶ ಅಂಚಟಗೇರಿ, ಹುಬ್ಬಳ್ಳಿಯಲ್ಲಿ ನಾಲ್ಕನೇ ಬಾರಿ ಗೆಲುವು ಸಾಧಿಸಿರುವ ರಾಮಣ್ಣ ಬಡಿಗೇರ, ಮಾಜಿ ಮೇಯರ್ ಪತಿ ಹಾಗೂ ಈ ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ತಿಪ್ಪಣ್ಣ ಮಜ್ಜಗಿ ಹಾಗೂ ರಾಮಣ್ಣ ಬಡಿಗೇರ ಹಾಗೂ ಸತೀಶ್ ಹಾನಗಲ್ ಅವರ ಹೆಸರುಗಳು ಸಹ ಕೇಳಿ ಬರುತ್ತಿವೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ತಯಾರಿ: ಸಭೆಯಲ್ಲಿ ಗದ್ದಲ.. ಸಮಾಧಾನ ಮಾಡಿದ ಹೆಚ್ಡಿಕೆ
ಇವರ ಜೊತೆಗೆ ಮಲ್ಲಿಕಾರ್ಜುನ ಗುಂಡೂರ, ವಿಜಯಾನಂದ ಶೆಟ್ಟಿ, ಉಮೇಶ ಕೌಜಗೇರಿ ಇವರ ಹೆಸರುಗಳು ಮೇಯರ್ ಸ್ಥಾನಕ್ಕೆ ಮುಂಚೂಣಿಯಲ್ಲಿವೆ. ಆದರೆ ಇವರನ್ನು ಶಾಸಕ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆಯ್ಕೆ ಮಾಡುವ ಸಾಧ್ಯತೆ ಇದೆ. ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿದ್ದು, ರೂಪಾ ಶೆಟ್ಟಿ, ಮೀನಾಕ್ಷಿ ಒಂಟಿಮೂರಿ ಮತ್ತು ಉಮಾ ಮುಕುಂದ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ