ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಮಾರ್ಚ್ 05ರಂದು ಸಿಎಂ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದು, ಮಹದಾಯಿಗೆ ಅಗತ್ಯ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಅನುದಾನ ನೀಡುತ್ತಾರೆ ಎಂಬ ಭರವಸೆಯಿದೆ ಎಂದರು.
ನೆರೆ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸಗಳಾಗಿದ್ದರೆ ಸರಿಪಡಿಸುತ್ತೇವೆ. ಕೇವಲ ಕುಂದಗೋಳ ತಾಲೂಕಿನಲ್ಲಿ ಮಾತ್ರವಲ್ಲ ಜಿಲ್ಲೆಯ ಯಾವುದೇ ಕಡೆ ತೊಂದರೆಯಾದ್ರು ಸರಿಪಡಿಸುತ್ತೇವೆ ಎಂದರು. ನೆರೆ ಪರಿಹಾರದಲ್ಲಿ ತಾರತಮ್ಯ ಕಂಡುಬಂದ್ರೇ ನಮ್ಮ ಗಮನಕ್ಕೆ ತನ್ನಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ದೆಹಲಿ ಹಿಂಸಾಚಾರದ ಹಿಂದೆ ಬಿಜೆಪಿ ಕೈವಾಡವಿದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆ ವಿಚಾರವಾಗಿ ಮಾತನಾಡಿ, ದಿನ ಒಬ್ಬೊಬ್ಬರು ಒಂದು ರೀತಿಯ ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಗೆ ರಿಯ್ಯಾಕ್ಷನ್ ಕೊಡಲು ನಮಗೆ ಸಮಯವಿಲ್ಲ ಎಂದರು. ಇನ್ನು ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಕಂಪನಿಗಳು ಮುಂದೆ ಬಂದಿದ್ದಾರೆ. ಒಬ್ಬೊಬ್ಬರಾಗಿ ಬಂದು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಈಗಾಗಲೇ 15 ಕಂಪನಿಗಳಿಗೆ ಭೂಮಿ ನೀಡಲು ಸಿದ್ಧತೆ ನಡದಿದೆ. ಆದಷ್ಟು ಬೇಗ ಕಾರ್ಯ ಪ್ರಾರಂಭ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.