ಹುಬ್ಬಳ್ಳಿ: ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ನಿರ್ಮಾಣ ಮಾಡಿದ್ರೆ ತಕ್ಕ ಪಾಠ ಕಲಿಸುವುದಾಗಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಗುಡುಗಿದ್ದಾರೆ.
ಇಲ್ಲಿನ ಈದ್ಗಾ ಮೈದಾನದಲ್ಲಿ ಭಕ್ತ ಕನಕದಾಸ ಜಯಂತಿ ಆಚರಣೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನಲ್ಲಿ ಶಾಸಕ ತನ್ವೀರ್ ಶೇಟ್ ಟಿಪ್ಪು ಪುತ್ಥಳಿ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ನಿನ್ನೆ ಟಿಪ್ಪು ಜಯಂತಿ ಆಚರಣೆ ಮಾಡಿದ್ದು ತಪ್ಪು. ಟಿಪ್ಪು ಒಬ್ಬ ಮತಾಂಧ, ದೇಶ ದ್ರೋಹಿ, ಕನ್ನಡ ವಿರೋಧಿ. ಮೈದಾನವನ್ನು ಗೋಮೂತ್ರದಿಂದ ಶುದ್ಧಿಕರಿಸಿ ಕನಕ ಜಯಂತಿ ಆಚರಣೆ ಮಾಡಿದ್ದೇವೆ ಎಂದು ಹೇಳಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಯ. ಕ್ಷೇತ್ರ ಯಾವುದು ಎಂದು ನಿರ್ಧಾರ ಮಾಡಿಲ್ಲ. ಕಾರ್ಕಳ, ಪುತ್ತೂರು, ಉಡುಪಿ, ಜಮಖಂಡಿ, ತೇರದಾಳ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಇದೆ ಎಂದರು.
ಟಿಪ್ಪು ಜಯಂತಿ ಆಚರಣೆ ದೊಡ್ಡ ತಪ್ಪು: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಟಿಪ್ಪು ಜಯಂತಿ ಅಚರಣೆ ಮಾಡಿದ ವಿಚಾರವಾಗಿ ಮಾತನಾಡಿ, ಇದು ಬಹಳ ದೊಡ್ಡ ತಪ್ಪು. ವಿರೋಧ ಪಕ್ಷದವರು ಸರ್ಕಾರದ ಜಾಗ ಬಿಟ್ಟು ಬೇರೆ ಕಡೆ ಜಯಂತಿ ಆಚರಣೆ ಮಾಡಬಹುದಿತ್ತು. ಅವರ ಮೇಲೆ ಮೇಯರ್ ಕೇಸ್ ಹಾಕಬೇಕು.ಇಲ್ಲದಿದ್ದರೇ ನಾವು ಕೇಸ್ ಹಾಕ್ತೀವಿ. ಟಿಪ್ಪು ಜಯಂತಿಗೆ ಅನುಮತಿ ಕೊಟ್ಟಿದ್ದೇ ಮೊದಲ ತಪ್ಪು. ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದು ಅಕ್ಷಮ್ಯ ಅಪರಾಧ. ಅಲ್ಲಿ ಹೇಗೆ ಅವಕಾಶ ಕೊಟ್ರಿ ಎಂದು ಮುತಾಲಿಕ್ ಪ್ರಶ್ನೆ ಮಾಡಿದ್ರು.
ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಕನಕ ಜಯಂತಿ ಆಚರಣೆ: ಗೋ ಮೂತ್ರ ಸಿಂಪಡಿಸಿ ಶುಚಿಗೊಳಿಸಿದ ಮುತಾಲಿಕ್