ಧಾರವಾಡ : ಮಲಪ್ರಭಾ ಡ್ಯಾಂನಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಮುಖ್ಯ ಪೈಪ್ಲೈನ್ ಒಡೆದಿದ್ದು ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಧಾರವಾಡದ ಮೃತ್ಯುಂಜಯ ನಗರದಲ್ಲಿ ಪೈಪ್ಲೈನ್ ಒಡೆದಿದ್ದು ನೀರು ಅಕ್ಕ-ಪಕ್ಕದ ಮನೆಗಳಿಗೆ ನುಗ್ಗಿ ಸಮಸ್ಯೆ ಉಂಟಾಗಿದೆ.
ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಮಹಾನಗರ ಪಾಲಿಕೆ ಅಧಿಕಾರಿಗಳು ಅದನ್ನು ಸರಿಪಡಿಸುವ ಕೆಲಸ ಕೈಗೆತ್ತಿಕೊಂಡಿದ್ದಾರೆ. ಭಾರಿ ವಾಹನಗಳು ಓಡಾಡುತ್ತಿರುವುದರಿಂದ ಮುಖ್ಯ ಪೈಪ್ಲೈನ್ ಒಡೆದಿದೆ ಎನ್ನಲಾಗುತ್ತಿದೆ.
ಕುಡಿಯುವ ನೀರು ಈ ರೀತಿ ಪೋಲಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸ್ಥಳೀಯರು, ಬೇಸಿಗೆ ಕಾಲ ಬಂದರೆ ಸಾಕು ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ವಿನಾ: ಕಾರಣ ಈ ಪ್ರಮಾಣದಲ್ಲಿ ಕುಡಿಯುವ ನೀರು ಪೋಲಾಗುವುದನ್ನು ಪಾಲಿಕೆ ಅಧಿಕಾರಿಗಳು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.