ಹುಬ್ಬಳ್ಳಿ: ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ, ಆಗಸ್ಟ್. 20 ರಂದು ಬೆಳಗ್ಗೆ 11 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ವಿವೇಕ ಮೊರೆ ತಿಳಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ, ಈಗಾಗಲೇ ರಾಜ್ಯದಾದ್ಯಂತ ಹಲವಾರು ಪ್ರತಿಭಟನೆಗಳನ್ನು ನಡೆಸಲಾಗಿದೆ. ಅಲ್ಲದೇ ರಾಜ್ಯದ 100 ತಾಲೂಕು ಕೇಂದ್ರದಲ್ಲಿ ಧರಣಿ ಸತ್ಯಾಗ್ರಹ ಕೂಡ ಮಾಡಿ ರಾಜ್ಯಪಾಲರಿಗೆ ಮತ್ತು ಸರ್ಕಾರಕ್ಕೆ ನೂರಾರು ಮನವಿ ಪತ್ರಗಳನ್ನು ನೀಡಲಾಗಿದೆ. ಆದ್ರೂ ಸಹಿತ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಸುಗ್ರಿವಾಜ್ಞೆಯನ್ನು ವಾಪಾಸ್ ತೆಗೆದುಕೊಂಡಿಲ್ಲ.
ಈ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮವನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘದ ಎಲ್ಲ ಜಿಲ್ಲಾ ಪ್ರತಿನಿಧಿಗಳು ಸೇರಿಕೊಂಡು ಪ್ರತಿಭಟಿಸಿ, ಕೂಡಲೇ ಸರ್ಕಾರ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯ ಮಾಡಲಾಗುವುದು ಎಂದರು.