ಧಾರವಾಡ: ಡ್ರಗ್ಸ್ ಕೇಸ್ ಚಾರ್ಜ್ಶೀಟ್ ಹಾಕಿದ ಪ್ರಕರಣದಲ್ಲಿ ತಾನು ನಿರೂಪಕಿ ಅನುಶ್ರೀ ಹೆಸರು ಹೇಳಿಲ್ಲ ಎಂದು ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ವಿಚಾರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ನಗರದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ದಳದ ನೂತನ ಪೊಲೀಸ್ ಠಾಣೆ ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಕರಣ ಸಂಬಂಧ ಎಲ್ಲಾ ರೀತಿಯ ವಿಚಾರಣೆ ಮುಗಿದಿದೆ. ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಮತ್ತೆ ಏನಾದ್ರೂ ಇದ್ದರೆ ಪುನಃ ವಿಚಾರಣೆ ಆಗುತ್ತದೆ ಎಂದರು.
ಈಗ ಹೆಸರು ಯಾರು ಹೊರಗೆ ತಂದಿದ್ದಾರೆ. ಯಾರ್ಯಾರೋ ಪ್ರಸ್ತಾಪ ಮಾಡುತ್ತಿದ್ದಾರೆ. ಕೋರ್ಟ್ ಮತ್ತು ಪೊಲೀಸ್ ಯಾರೂ ಹೆಸರು ಪ್ರಸ್ತಾಪ ಮಾಡಿಲ್ಲ. ಮಧ್ಯದಲ್ಲಿ ಯಾರೋ ಪ್ರಸ್ತಾಪ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಲು ಆಗುತ್ತಾ ಎಂದು ಸಚಿವರು ಪ್ರಶ್ನಿಸಿದರು.
ಪದೇ ಪದೇ ಸಿಎಂ ದೆಹಲಿ ಪ್ರವಾಸ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ದೆಹಲಿಯಲ್ಲಿ ಹಣಕಾಸು ಸಚಿವರನ್ನು ಸಿಎಂ ಭೇಟಿ ಮಾಡಿದ್ದಾರೆ. ಆ ಫೋಟೋಗಳು ಬಂದಿವೆ. ಬೇರೆ ಬೇರೆ ಕೆಲಸಗಳು ಇರುತ್ತವೆ. ಅದಕ್ಕಾಗಿ ದೆಹಲಿಗೆ ಹೋಗಿ ಬರುತ್ತಾರೆ. ನಮ್ಮ ಫೈಲ್‌ಗಳನ್ನು ಮೂವ್ ಮಾಡಿಸಲು ಹೋಗಬೇಕಾಗುತ್ತದೆ. ನಮ್ಮಲ್ಲಿ ಯಾವ ಮೈಮನಸ್ಸು ಸಹ ಇಲ್ಲ. ಎಲ್ಲವೂ ತುಂಬಾ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಮುಕ್ತವಾಗಿ ಸಿಎಂ ಬಗ್ಗೆ ಹೇಳಿ ಹೋಗಿದ್ದಾರೆ. ರಾಜ್ಯದಲ್ಲಿ ಜಟಿಲವಾದ ಸಮಸ್ಯೆಗಳಿವೆ. ಅಭಿವೃದ್ಧಿ ಕೆಲಸಗಳಿವೆ. ಅವುಗಳ ಪರಿಹಾರಕ್ಕೆ ಸಿಎಂ ದೆಹಲಿಗೆ ಹೋಗುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದ್ರು.