ಧಾರವಾಡ : ಜಿಲ್ಲೆಯಾದ್ಯಂತ ಸುರಿಯುತ್ತಿರುವ ವರುಣನ ಆರ್ಭಟದಿಂದ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಮುದ್ದಪ್ಪನ ಕೆರೆ ಕೋಡಿ ತುಂಬಿ ಹರಿಯುತ್ತಿದೆ. ಮಳೆಯಿಂದ ಕೆರೆ ಸಂಪೂರ್ಣ ಭರ್ತಿಯಾಗಿದೆ. ಹೆಚ್ಚುವರಿ ನೀರು ಹರಿದು ಹೋಗುತ್ತಿದೆ.
ಗುರುವಾರದಿಂದ ಆರ್ಭಟಿಸುತ್ತಿರುವ ವರುಣದೇವನ ಅವಕೃಪೆಯಿಂದ ಗ್ರಾಮೀಣ ಭಾಗದ ಜನ-ಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದಾಗಿ ಬೆಣ್ಣೆಹಳ್ಳ ಸೇರುವ ಹಿರೇಹಳ್ಳ ಹಾಗೂ ಚಿಕ್ಕಹಳ್ಳಗಳು ಮೈತುಂಬಿ ಹರಿಯುತ್ತಿವೆ. ಈಗಾಗಲೇ ಅಪಾಯದಮಟ್ಟ ಮೀರಿ ಹರಿಯುತ್ತಿವೆ.
ಕುರಿಗಳು, ಕುರಿಗಾಯಿಗಳ ರಕ್ಷಣೆ
ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಬಳಿಯ ಬೆಣ್ಣೆಹಳ್ಳದಲ್ಲಿ ಸುಮಾರು 200ಕ್ಕೂ ಹೆಚ್ಚು ಕುರಿಗಳು ಸೇರಿದಂತೆ ಕುರಿಗಾಯಿಗಳು ಸಿಲುಕಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕು ಆಡಳಿತ ಹಾಗೂ ಪೊಲೀಸರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತುಂಬಿ ಹರಿಯುತ್ತಿದೆ ಉಣಕಲ್ ಕೆರೆ
ಜಿಲ್ಲೆಯಲ್ಲಿ ಬಿಡದೇ ಸುರಿಯುತ್ತಿರುವ ಮಳೆಯಿಂದ ಅವಳಿನಗರದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಉಣಕಲ್ ಕೆರೆ ತುಂಬಿ ಹರಿಯುತ್ತಿದೆ. ಉಣಕಲ್ ಕೆರೆಯ ದೃಶ್ಯ ಮನಮೋಹಕವಾಗಿದೆ. ಆದರೆ, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಸುಮಾರು 213 ಎಕರೆ ವಿಸ್ತಾರದ ಉಣಕಲ್ ಕೆರೆಯ ರಾಜನಾಲಾಗಳಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ನಗರದ ಎತ್ತರದ ಪ್ರದೇಶಗಳಾದ ಗಾಮನಗಟ್ಟಿ, ನವನಗರ, ಅಮರಗೋಳದ ಮಾರ್ಗವಾಗಿ ಬರುವ ರಾಜನಾಲಾದ ನೀರು ಕೆರೆಗೆ ಸೇರುತ್ತಿದೆ. ನಿರಂತರ ಮಳೆಯಿಂದಾಗಿ ಕೆರೆಯ ಹೆಚ್ಚುವರಿ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಹೋಗುತ್ತಿದೆ. ಸುಮಾರು ವರ್ಷದ ನಂತರ ಉಣಕಲ್ ಕೆರೆ ಕೋಡಿ ಬಿದ್ದಿರುವ ದೃಶ್ಯ ರಮಣೀಯವಾಗಿದೆ.
ಮನೆಗೆ ನುಗ್ಗಿದ ನೀರು : ಆತಂಕದಲ್ಲಿ ಕುಟುಂಬಸ್ಥರು
ಭಾರೀ ಮಳೆಯಿಂದಾಗಿ ರಸ್ತೆ ಹಾಗೂ ಮನೆಗಳಲ್ಲಿ ಮಳೆ ನೀರು ತುಂಬಿ ಅವಾಂತರ ಸೃಷ್ಟಿಯಾಗಿರುವ ಘಟನೆ ಹುಬ್ಬಳ್ಳಿ ಚೇತನಾ ಕಾಲೋನಿಯಲ್ಲಿ ನಡೆದಿದೆ. ಈ ಸಮಸ್ಯೆ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ.
ಓದಿ: ವರುಣನ ಆರ್ಭಟಕ್ಕೆ ಹಲವೆಡೆ ಭೂಕುಸಿತ: ಹಳಿತಪ್ಪಿದ ಮಂಗಳೂರು-ಮುಂಬೈ ರೈಲು..ಪ್ರಯಾಣಿಕರ ಪರದಾಟ!