ಧಾರವಾಡ: ಎಟಿಎಮ್ ದೋಷದಿಂದ ಎಟಿಎಮ್ನಲ್ಲೇ ಉಳಿದ ಹಣವನ್ನು ಗ್ರಾಹಕನಿಗೆ ನೀಡಲು ನಿರಾಕರಿಸಿದ ಹೆಚ್ಡಿಎಫ್ಸಿ ಬ್ಯಾಂಕಿಗೆ 2 ಲಕ್ಷದ 24 ಸಾವಿರ ರೂ.ಗಳ ಭಾರಿ ದಂಡ ವಿಧಿಸಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಹುಬ್ಬಳ್ಳಿಯ ಅಂಚಟಗೇರಿ ನಿವಾಸಿ ಮಹ್ಮದರಫಕತ್ ಅನಸಾರಿ ಎಂಬುವವರು ಬಿಹಾರ ರಾಜ್ಯದ ಮುಝಫರಪುರ್ಗೆ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ ಹೆಚ್ಡಿಎಫ್ಸಿ ಬ್ಯಾಂಕಿನ ಎಟಿಎಮ್ ನಲ್ಲಿರೂ. 10 ಸಾವಿರದಂತೆ ಎರಡು ಬಾರಿ ಹಣ ತೆಗೆಯಲು ತನ್ನ ಎಟಿಎಮ್ ಕಾರ್ಡ್ ಬಳಸಿದ್ದರು. ಆದರೆ ಎಟಿಎಮ್ ನಿಂದ ಹಣ ಬರದೇ ಇದ್ದರೂ ಅವರ ಉಳಿತಾಯ ಖಾತೆಯಿಂದ ರೂ.20,000 ಡೆಬಿಟ್ ಆಗಿತ್ತು. ಈ ಬಗ್ಗೆ ದೂರುದಾರ ತನ್ನ ಉಳಿತಾಯ ಖಾತೆ ಇರುವ ಹುಬ್ಬಳ್ಳಿಯ ಅಂಚಟಗೇರಿಯ ಯುನಿಯನ್ ಬ್ಯಾಂಕ್‍ಗೆ ದೂರು ನೀಡಿ ಎಟಿಎಮ್ ತಪ್ಪನ್ನು ಸರಿಪಡಿಸಲು ಕೋರಿದ್ದರು.
ಆ ದೂರಿನ ಆಧಾರದ ಮೇಲೆ ಯುನಿಯನ್ ಬ್ಯಾಂಕಿನವರು ಎಟಿಎಮ್ ದೋಷದಿಂದ ಬಾರದ ರೂ.20,000 ಗಳನ್ನು ತಕ್ಷಣ ದೂರುದಾರರ ಖಾತೆಗೆ ಜಮಾ ಮಾಡುವಂತೆ ಹೆಚ್ಡಿಎಫ್ಸಿ ಬ್ಯಾಂಕ್‍ಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೂ ಸದರಿ ಬ್ಯಾಂಕಿನವರು ರೂ.20,000 ಗಳ ಹಣ ತನ್ನ ಖಾತೆಗೆ ಜಮಾ ಮಾಡಿಲ್ಲವಾದ್ದರಿಂದ ತನಗೆ ತೊಂದರೆಯಾಗಿ ಆ ಬ್ಯಾಂಕಿನಿಂದ ತನಗೆ ಸೇವಾ ನ್ಯೂನ್ಯತೆ ಆಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಹೆಚ್ಡಿಎಫ್ಸಿ ಬ್ಯಾಂಕಿನ ಎಟಿಎಮ್ ಯಂತ್ರದ ದೋಷದಿಂದ ದೂರುದಾರನಿಗೆ ಹಣ ಬಂದಿಲ್ಲ. ಕಾರಣ ಆ ಹಣ ಬ್ಯಾಂಕಿನಲ್ಲಿಯೇ ಉಳಿದಿತ್ತು. ಈ ಬಗ್ಗೆ ಯುನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರು 2019ರಲ್ಲಿ ಎರಡು ಬಾರಿ ಎಫ್ಟಿಎಸ್ ಸೆಂಟರ್ನಿಂದ ಹೆಚ್ಡಿಎಫ್ಸಿ ಬ್ಯಾಂಕ್‍ನವರನ್ನು ಸಂಪರ್ಕಿಸಿ ದೂರುದಾರನ ಹಣವನ್ನು ಗ್ರಾಹಕನ ಖಾತೆಗೆ ಹಿಂದಿರುಗಿಸಲು ಕೋರಿದ್ದರು.
ಆದರೂ ಹೆಚ್ಡಿಎಫ್ಸಿ ಬ್ಯಾಂಕಿನವರು ಘಟನೆ ನಡೆದ ದಿ:17/01/2019 ರಿಂದ ಈವರೆಗೆ ಸುಮಾರು 4 ವರ್ಷ ದೂರುದಾರನ ಖಾತೆಗೆ ಹಣ ಜಮಾ ಮಾಡಿರಲಿಲ್ಲ. ಈ ರೀತಿ ಎಟಿಎಮ್ ದೋಷದಿಂದ ಹಣ ಬಾರದ ಪ್ರಸಂಗಗಳಲ್ಲಿ 6 ದಿವಸದೊಳಗಾಗಿ ಸಂಬಂಧಿಸಿದ ಬ್ಯಾಂಕಿನವರು ಕ್ರಮ ಕೈಗೊಂಡು ಗ್ರಾಹಕನ ಖಾತೆಗೆ ತಕ್ಷಣ ಹಣ ಜಮಾ ಮಾಡಬೇಕು. ತಪ್ಪಿದ್ದಲ್ಲಿ 7ನೇ ದಿನದಿಂದ ಜಮಾ ಆಗುವವರೆಗೆ ಪ್ರತಿ ದಿನ 100ರೂ. ಗಳ ಪೆನಾಲ್ಟಿ ಕೊಡಬೇಕು ಎಂಬುದಾಗಿ ಆರ್ಬಿಐ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಆದರೂ ಈವರೆಗೆ ಸುಮಾರು 4 ವರ್ಷಗಳ ಕಾಲ ಹಣ ದೂರುದಾರನ ಖಾತೆಗೆ ಜಮಾ ಮಾಡದೇ ಸದರಿ ಬ್ಯಾಂಕಿನ ಸಿಬ್ಬಂದಿ ಕರ್ತವ್ಯಲೋಪ ಎಸಗಿ ಸೇವಾ ನ್ಯೂನತೆ ಮಾಡಿದ್ದಾರೆ ಎಂದು ತನ್ನ ತೀರ್ಪಿನಲ್ಲಿ ಜಿಲ್ಲಾ ಗ್ರಾಹಕರ ಆಯೋಗ ಅಭಿಪ್ರಾಯಪಟ್ಟಿದೆ.
ದಿ:17/01/2019 ರಂದು ಈ ಘಟನೆ ನಡೆದಿದ್ದು ಅದು ಆದ 6 ದಿವಸದ ನಂತರ ದಿ:23/01/2019 ರಿಂದ ಈ ತೀರ್ಪು ನೀಡಿದ ದಿ:03/01/2023ರ ವರೆಗೆ 1441 ದಿವಸಕ್ಕೆ ಪ್ರತಿ ದಿವಸಕ್ಕೆ 100 ರೂಪಾಯಿಯಂತೆ ಲೆಕ್ಕಾ ಹಾಕಿ ಹೆಚ್ಡಿಎಫ್ಸಿ ಬ್ಯಾಂಕಿನವರು ದೂರುದಾರನಿಗೆ ರೂ.1,44,100 ಗಳ ಪೆನಾಲ್ಟಿ, ರೂ.20,000 ಗಳ ಎಟಿಎಮ್ ಹಣ, ಮತ್ತು ದೂರುದಾರನಿಗೆ ಆಗಿರುವ ತೊಂದರೆ ಮತ್ತು ಮಾನಸಿಕ ಹಿಂಸೆಗೆ ರೂ.50,000 ಗಳ ದಂಡ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಎಂದು ರೂ.10,000 ಸೇರಿ ಒಟ್ಟು 2,24,100 ರೂ ಗಳನ್ನು ಶೇ8% ರಂತೆ ಬಡ್ಡಿ ಹಾಕಿ ನೀಡುವಂತೆ ಹೆಚ್ಡಿಎಫ್ಸಿ ಬ್ಯಾಂಕಿಗೆ ಆಯೋಗ ಆದೇಶಿಸಿದೆ.
ಇದನ್ನೂ ಓದಿ:ಪುರುಷರು ಎಂಬಲ್ಲಿ ಸಿಬ್ಬಂದಿ ಎಂಬುದಾಗಿ ಬದಲಾಯಿಸಿ : ಹೈಕೋರ್ಟ್ ಸರ್ಕಾರಕ್ಕೆ ಸೂಚನೆ