ಧಾರವಾಡ: ಮನೆ ಕಟ್ಟಿಕೊಡದ ಬಿಲ್ಡರ್ಗೆ ದೂರುದಾರರಿಂದ ಪಡೆದ ಮುಂಗಡ ಹಣ 3,07,500 ರೂಪಾಯಿ ಬಡ್ಡಿಸಮೇತ ಪರಿಹಾರ ಮತ್ತು ದಂಡ ಕೊಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ಆದೇಶಿಸಿದೆ.
ಧಾರವಾಡ ನಿವಾಸಿಗಳಾದ ಮಧು, ಪುಷ್ಪಾ, ಸರೋಜಾ ಕಲವೆಕತಕರ್ ಎಂಬವರಿಗೆ ಧಾರವಾಡದ ಶ್ರೀ ವೀರಭದ್ರೇಶ್ವರ ಇನ್‍ಪ್ರಾಸ್ಟ್ರಕ್ಚರ್ ಮತ್ತು ಹೌಸಿಂಗ್ ಪ್ರೈ.ಲಿ. ಇದರ ಆಡಳಿತಾತ್ಮಕ ನಿರ್ದೇಶಕ ನಾಗನಗೌಡ ಶಿವನಗೌಡ ನೀರಲಗಿಯವರು ಪೂರ್ಣಿಮಾ ಲೇಔಟ್‍ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ನ್ಯಾನೊ ಅಪಾರ್ಟಮೆಂಟ್‍ನಲ್ಲಿ ಪ್ಲ್ಯಾಟ್ ಕೊಡಲು ಒಪ್ಪಿದ್ದರು.
ಬಳಿಕ ಪ್ರತಿಯೊಬ್ಬರಿಂದ ತಲಾ 1,02,500 ರೂಪಾಯಿಗಳನ್ನು ಪಡೆದುಕೊಂಡು ಅಗಸ್ಟ್ 30 ರಂದು ಒಪ್ಪಂದ ಮಾಡಿಕೊಂಡಿದ್ದು, ಆ ಪೈಕಿ ಒಟ್ಟು ದೂರುದಾರರಿಂದ ರೂ.3,07,500 ಮುಂಗಡವಾಗಿ ಪಡೆದುಕೊಂಡಿದ್ದರು.
ಮುಂಗಡ ಹಣ ಕೊಟ್ಟು ಒಪ್ಪಂದ ಆಗಿದ್ದರೂ ಬಿಲ್ಡರ್ ತಮಗೆ ಸದರಿ ಅಪಾರ್ಟಮೆಂಟ್‍ನಲ್ಲಿ ಮನೆ ನಿರ್ಮಾಣ ಮಾಡಿಕೊಡದೇ ಹಾಗೂ ಖರೀದಿ ಪತ್ರ ಬರೆದು ಕೊಡದೇ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಎಂದು ಬಿಲ್ಡರ ಮೇಲೆ ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷೆ ವಿಶಾಲಾಕ್ಷಿ ಅ.ಬೋಳಶೆಟ್ಟಿ ಮತ್ತು ಸದಸ್ಯ ಪ್ರಭು ಸಿ ಹಿರೇಮಠ, ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡಿದ್ದು, ದೂರುದಾರರಿಗೆ ಪ್ಲ್ಯಾಟ್ ಸ್ವಾಧೀನಕ್ಕೆ ಕೊಡದೇ ಇರುವುದರಿಂದ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನತೆ ಎಸಗಿ ಮೋಸ ಮಾಡಿರುತ್ತಾರೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಈ ಬಗ್ಗೆ ವೀರಭದ್ರೇಶ್ವರ ಹೌಸಿಂಗ್ ಪ್ರೈ.ಲಿ. ಆಡಳಿತಗಾರ ಎನ್ ಎಸ್ ನೀರಲಗಿ ದೂರುದಾರರಿಂದ ಪಡೆದ ಒಟ್ಟು 3,07,500 ರೂಪಾಯಿಗಳನ್ನು ಶೇ.8ರಂತೆ ಬಡ್ಡಿ ಲೆಕ್ಕ ಹಾಕಿ ಹಾಗೂ ಮಾನಸಿಕ ತೊಂದರೆಗೆ ಪ್ರತಿಯೊಬ್ಬ ದೂರುದಾರರಿಗೆ 25,000 ರೂ. ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ 10,000 ರೂ. ಗಳನ್ನು ಈ ಆದೇಶದ ದಿನಾಂಕದಿಂದ ಒಂದು ತಿಂಗಳ ಒಳಗಾಗಿ ಕೊಡುವಂತೆ ಹೇಳಿದೆ.
ಇದನ್ನೂ ಓದಿ: ಮಾನನಷ್ಟ ಪ್ರಕರಣದ ವಿಚಾರಣೆ: ಜ.25 ರವರೆಗೆ ರಾಹುಲ್ ಗಾಂಧಿ ನಿರಾಳ