ಹುಬ್ಬಳ್ಳಿ: ಇಷ್ಟು ದಿನ ಚುನಾಯಿತ ಪಾಲಿಕೆ ಸದಸ್ಯರು ಅಧಿಕಾರಕ್ಕೆ ಕೋರ್ಟ್ ಮೊರೆ ಹೋಗಿದ್ದನ್ನು ನೋಡಿದ್ದೇವೆ. ಆದರೆ, ಈಗ ಪಾಲಿಕೆಯ ನಿರ್ಧಾರವನ್ನು ಖಂಡಿಸಿ ಪ್ರತಿಷ್ಠಿತ ಸಂಸ್ಥೆಯೊಂದು ಕೋರ್ಟ್ ಮೆಟ್ಟಿಲೇರಿದೆ. ಈಗಾಗಲೇ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಇದರ ನಡುವೆ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳದ ಶಾಕ್ ನೀಡಿದೆ. ಇದರ ವಿರುದ್ಧ ಇಲ್ಲಿನ ಚೆಂಬರ್ ಆಫ್ ಕಾಮರ್ಸ್ ಧ್ವನಿ ಎತ್ತಿ ಸರ್ಕಾರಕ್ಕೆ ಚಾಟಿ ಬೀಸಲು ಸಿದ್ಧವಾಗಿದೆ.
ಹು-ಧಾ ಮಹಾನಗರ ಪಾಲಿಕೆ ರಾಜ್ಯದ ಅತಿದೊಡ್ಡ ಮಹಾನಗರ ಪಾಲಿಕೆಯೆಂಬ ಹೆಗ್ಗಳಿಕೆ ಹೊಂದಿದೆ.ಇದೀಗ ಪಾಲಿಕೆ ಆಸ್ತಿ ತೆರಿಗೆಯನ್ನು ಶೇ.37 ರಿಂದ ಶೇ. 900 ರಷ್ಟು ಹೆಚ್ಚಳ ಮಾಡಿದೆ. ಇದು ಸಂಪೂರ್ಣ ಅವೈಜ್ಞಾನಿಕ ಹಾಗೂ ಜನತೆಗೆ ಮಾಡುತ್ತಿರುವ ಅನ್ಯಾಯ ಎಂದು ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಲವು ದಿನಗಳಿಂದ ಪ್ರತಿಪಾದಿಸುತ್ತಾ ಬರುತ್ತಿದೆ. ಇದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.
ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಮಹೇಂದ್ರ ಲದ್ದಡ ಹಾಗೂ ಈಗಿನ ಅಧ್ಯಕ್ಷ ವಿನಯ ಜವಳಿ ಈಗಾಗಲೇ ತಮ್ಮ ತಕರಾರು ದಾಖಲಿಸಿ, ಹೆಚ್ಚಳ ಮರುಪರಿಶೀಲನೆ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದಾರೆ. ಅಲ್ಲದೇ ಆಂತರಿಕ ಸಭೆಗಳಲ್ಲಿ ತಮ್ಮ ಬೇಸರವನ್ನು ಹೊರಹಾಕಿದ್ದೂ ಉಂಟು. ಆದರೆ ಸರ್ಕಾರಕ್ಕೆ ಅವೈಜ್ಞಾನಿಕ ಆಸ್ತಿ ತೆರಿಗೆ ಕುರಿತು ಮನವರಿಕೆ ಕೆಲಸ ಮಾಡಿದರೂ ವಿಫಲವಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿದೆ.
ಆದರೆ, ಈ ತೆರಿಗೆ ಹೆಚ್ಚಳದ ಮಹಾನಗರ ಪಾಲಿಕೆ ಕೆಲವೊಂದು ಮಾನದಂಡಗಳನ್ನು ಪಾಲಿಸಲಾಗುತ್ತಿದೆ. ಒಟ್ಟು ಆಸ್ತಿಯ ಮೌಲ್ಯದ ಮೇಲೆ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಇದು ಪ್ರತಿವರ್ಷದ ಪ್ರಕ್ರಿಯೆ ಎಂದು ಪಾಲಿಕೆ ಆಯುಕ್ತರು ಸಮಜಾಯಿಷಿ ನೀಡುತ್ತಿದ್ದಾರೆ.
ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿಯಿಂದ ಆರೋಪಿ ಯುವತಿಯ ಬಂಧನ