ದಾವಣಗೆರೆ: 2009ರಲ್ಲಿ ಪಂಚಮಸಾಲಿ ಸಮುದಾಯವನ್ನು 3ಬಿಯಲ್ಲಿ ಸೇರಿಸಿದ್ದೇ ಬಿ.ಎಸ್.ಯಡಿಯೂರಪ್ಪ ಎಂದು ವಚನಾನಂದ ಶ್ರೀ ಹೇಳಿದರು. ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಮಠದಲ್ಲಿ ಮಾತನಾಡಿದ ಅವರು, ಅಧಿಕೃತವಾಗಿ ಪಂಚಮಸಾಲಿ ಸಮುದಾಯವನ್ನು ಮೊಟ್ಟಮೊದಲ ಬಾರಿಗೆ ಗೆಜೆಟ್‌ನಲ್ಲಿ ಸೇರಿಸಿದ್ದೇ ಹರಿಹರ ಪಂಚಮಸಾಲಿ ಮಠ ಎಂದರು.
ಮೀಸಲಾತಿ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ನಡೆದಿದ್ದು, ಎರಡು ವಾರಕ್ಕೊಮ್ಮೆ ನಾವು ರಾಜ್ಯ-ಕೇಂದ್ರ ಹಿಂದುಳಿದ ವರ್ಗಗಳ ಆಯೋಗದ ಜೊತೆ ಸಂಪರ್ಕದಲ್ಲಿದ್ದೇವೆ. ಕೋವಿಡ್‌ನಿಂದ ಮೀಸಲಾತಿಯ ಬಗ್ಗೆ ಸಮೀಕ್ಷೆ ನಡೆದಿರಲಿಲ್ಲ. ಜಯಪ್ರಕಾಶ್ ಹೆಗ್ಡೆ ಮೀಸಲಾತಿ ಸಮೀಕ್ಷೆ ಇದೀಗ ಮುಂದುವರೆಸಿದ್ದಾರೆ ಎಂದು ಹೇಳಿದರು.
2ಎ ಮೀಸಲಾತಿ ಹೋರಾಟವನ್ನ ನಾವಿನ್ನೂ ನಿಲ್ಲಿಸಿಲ್ಲ. ವೀರಶೈವ-ಲಿಂಗಾಯತರನ್ನೆಲ್ಲಾ ಒಂದು ಮಾಡಬೇಕು. ನಾವೆಲ್ಲ ಒಂದಾಗಬೇಕು ಅಂದರೆ ಎಲ್ಲ ಲಿಂಗಾಯತರನ್ನ ಒಬಿಸಿ ಅಡಿ ತರಬೇಕು. ಅಂದಾಗ ನಾವೆಲ್ಲ ಒಂದಾಗೋಕೆ ಸಾಧ್ಯವಾಗುತ್ತೆ. ಎಲ್ಲರನ್ನೂ ಒಬಿಸಿ ಅಡಿ ತರಲು ಮಠದಿಂದ ಕೂಡ ಹೋರಾಟ ನಡೆಯುತ್ತಿದೆ ಎಂದರು.
ಬೃಹತ್ ಉದ್ಯೋಗ ಮೇಳ: ಹರಿಹರ ಪಂಚಮಸಾಲಿ ಪೀಠದಲ್ಲಿ ಏಪ್ರಿಲ್ 23-24 ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಉದ್ಯಮಿಯಾಗು ಉದ್ಯೋಗ ನೀಡು. ಕೌಶಲ್ಯ ಕೃಷಿ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮಠದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಹಲವು ರಾಷ್ಟ್ರೀಯ ಕಂಪನಿಗಳು ಬಂದು ಯುವಕರಿಗೆ ಉದ್ಯೋಗ ನೀಡಲಿವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಕನ್ನಡ ಕಡ್ಡಾಯ ತೀರ್ಪು ಪಡೆಯುತ್ತೇವೆ : ಸಚಿವ ಅಶ್ವತ್ಥ್ ನಾರಾಯಣ