ದಾವಣಗೆರೆ: ಗಂಡ ನಾಪತ್ತೆಯಾದ ಬಳಿಕ ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲೂ ಕೆಲಸ ಮಾಡುತ್ತಾ ಪೌರಕಾರ್ಮಿಕ ಕೆಲಸವನ್ನೂ ಮಾಡುತ್ತಿದ್ದ ಮಹಿಳೆಯೊಬ್ಬರು ಕಷ್ಟಪಟ್ಟು ದುಡಿದು, 4 ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಅಂದಹಾಗೆ ಇಂತಹ ಮಹಾನ್ ಸಾಧನೆ ಮಾಡಿರುವ ಪೌರಕಾರ್ಮಿಕಳ ಹೆಸರು ಶೇಖಮ್ಮ. ಇವರ ಪತಿ ಪಿ. ನಾರಾಯಣ ಸಿಪಿಐ ಮುಖಂಡರಾಗಿದ್ದು, ಹಟ್ಟಿ ಚಿನ್ನದ ಗಣಿಯಲ್ಲಿ ಕಾರ್ಮಿಕರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದರು. ಈ ಸಂಬಂಧ ಅವರು ಜೈಲು ಶಿಕ್ಷೆ ಸಹ ಅನುಭವಿಸಿದ್ದರು. 1964ರ ಮೇ ತಿಂಗಳಲ್ಲಿ ಕೋಲ್ಕತ್ತಾಗೆ ಹೋಗಿ ಬರುವುದಾಗಿ ಹೇಳಿ ಹೋದ ನಾರಾಯಣ ಆಮೇಲೆ ವಾಪಸ್ ಬರಲೇ ಇಲ್ಲ.
ಇದರಿಂದ ಶೇಖಮ್ಮ ಚಿಂತಿತರಾದರೂ, ತಮ್ಮ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾದರು. ನಾಲ್ಕು ಮಕ್ಕಳ ಭವಿಷ್ಯದ ಕುರಿತು ಯೋಚನೆ ಮಾಡಲಾರಂಭಿಸಿದರು. ಹೊಟ್ಟೆಪಾಡಿಗಾಗಿ ಹಟ್ಟಿ ಚಿನ್ನದ ಗಣಿಯಲ್ಲಿ ಪೌರಕಾರ್ಮಿಕ ಕೆಲಸ ಮಾಡಿದರು. ತಿಂಗಳಿಗೆ ಬರುತ್ತಿದ್ದ 56 ರೂಪಾಯಿ ಸಂಬಳದಲ್ಲೇ ನಾಲ್ಕು ಮಕ್ಕಳನ್ನು ಸಾಕಿ - ಸಲಹಿದರು.
ಹಠತೊಟ್ಟು ಮಕ್ಕಳ ಬೆಳೆಸಿದ ಶೇಖಮ್ಮ: ನಾನು ಮಾಡುವ ಪೌರ ಕಾರ್ಮಿಕ ಕೆಲಸ ನನ್ನಿಂದಲೇ ಕೊನೆಯಾಗಲಿ ಎಂದು ಶಪಥ ಮಾಡಿದ ಶೇಖಮ್ಮ ಧೈರ್ಯದಿಂದ ಮುಂದಡಿಯಿಟ್ಟರು. ತಮ್ಮ ನಾಲ್ವರೂ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ ಕೊಡಿಸಲು ಮುಂದಾದರು. ಅಂದಿನ ಕಾಲದಲ್ಲಿ ದಲಿತ ಕುಟುಂಬದ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿದ್ದು ಸಾಧನೆಯ ಜೊತೆಗೆ ದಾಖಲೆ ಎಂದರೆ ತಪ್ಪಲ್ಲ. ಓದು, ಬರಹ ಗೊತ್ತಿಲ್ಲದ ಶೇಖಮ್ಮನಿಗೆ ಶಿಕ್ಷಣದ ಬಗ್ಗೆ ಅಪಾರ ಕಾಳಜಿ, ಪ್ರೀತಿ ಇತ್ತು. ಇವರ ಹಠವೇ ಅವರ ನಾಲ್ವರು ಮಕ್ಕಳು ಆಕಾಶದೆತ್ತರಕ್ಕೆ ಬೆಳೆಯಲು ಕಾರಣವಾಗಿದೆಯಂತೆ.
ಇದನ್ನೂ ಓದಿ: ನಿರ್ಬಂಧದ ವಿರುದ್ಧ ಪ್ರತಿತಂತ್ರ ಬಳಸಿದ ರಷ್ಯಾದಿಂದ ರಫ್ತು ಬ್ಯಾನ್!
ಮನಮೋಹನ್ ಸಿಂಗ್ ತಂಡದಲ್ಲಿದ್ದ ಶೇಖಮ್ಮ ಪುತ್ರಿ: ಹಿರಿಯ ಪುತ್ರ ರವಿನಾರಾಯಣ ಐಪಿಎಸ್ ನಂತರ ಎಸ್ಪಿ ಆಗಿ ಇತ್ತೀಚಿಗೆ ನಿವೃತ್ತರಾಗಿದ್ದಾರೆ. ಇನೊಬ್ಬ ಪುತ್ರಿ ಭಾಗ್ಯದೇವಿ ಎಂ.ಎ. ಮಾಡಿದ್ದು, ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ನಂತರ ಐಆರ್ಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದಾಗ ಭಾಗ್ಯದೇವಿ ಆರ್ಥಿಕ ಸಲಹೆಗಾರರ ತಂಡದಲ್ಲಿದ್ದರು. ಸದ್ಯಕ್ಕೆ ತಮಿಳುನಾಡಿನ ತೆರಿಗೆ ಆಯುಕ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನೊಬ್ಬ ಪುತ್ರ ಪದ್ಮವರದನ್ ವಕೀಲರಾಗಿದ್ದರು. ಮತ್ತೊಬ್ಬ ಪುತ್ರಿ ಕಮಲಾ ಅಂಚೆ ಅಧಿಕಾರಿ ಆಗಿ ಕೆಲಸ ನಿರ್ವಹಿಸಿದ್ದರು. ಈಗ ಇವರ ಪುತ್ರಿ ಪದ್ಮಾ ಬಸವಂತಪ್ಪ ಐಎಎಸ್ ಅಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಮುಂದುವರೆದ ಕಾಳ್ಗಿಚ್ಚು: 24 ಸಾವಿರ ಹೆಕ್ಟೇರ್ ಅರಣ್ಯ ನಾಶ
ಒಬ್ಬ ದಲಿತ ಮಹಿಳೆ ಗಂಡನ ಅಗಲಿಕೆ ನಡುವೆ ಧೈರ್ಯ ಕಳೆದುಕೊಳ್ಳದೆ, ಬರುವ ಅಲ್ಪ ಸಂಬಳದಲ್ಲೇ ತಮ್ಮ ನಾಲ್ವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಸಂಕಷ್ಟದ ಸಮಯದಲ್ಲೂ ಮಕ್ಕಳನ್ನು ಉತ್ತಮ ಅಧಿಕಾರಿಗಳನ್ನಾಗಿ ಮಾಡಿದ್ದು ಪ್ರಶಂಸನೀಯ. ಇವೆಲ್ಲದರ ಹಿಂದೆ ಸಾಧಕಿ ಶೇಖಮ್ಮ ಅವರ ಬಹಳ ದೊಡ್ಡ ಶ್ರಮ ಇದೆ. ಇಷ್ಟೆಲ್ಲ ಕಷ್ಟಪಟ್ಟು ಬೆಳೆದ ಶೇಖಮ್ಮ ಈಗಲೂ ಲವಲವಿಕೆಯ ಜೀವನ ಮಾಡುತ್ತಿದ್ದಾರೆ. ಆದರೆ, ಇವರ ನಾಲ್ವರು ಮಕ್ಕಳಲ್ಲಿ ಪುತ್ರ ಪದ್ಮವರದನ್ ಹಾಗೂ ಪುತ್ರಿ ಕಮಲಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ನಿವೃತ್ತ ಎಸ್ಪಿ ಪುತ್ರ ರವಿನಾರಾಯಣ ಆಸರೆಯಲ್ಲಿ ಬದುಕು ಸಾಗಿಸುತ್ತಿರುವ ವೃದ್ಧೆ: 89 ವರ್ಷದ ಶೇಖಮ್ಮ ಸದ್ಯಕ್ಕೆ ಪುತ್ರ, ನಿವೃತ್ತ ಎಸ್ಪಿ ರವಿನಾರಾಯಣ ಅವರ ಆಸರೆಯಲ್ಲಿ ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಮಕ್ಕಳು ದೊಡ್ಡ ದೊಡ್ಡ ಹುದ್ದೆಗೆ ಹೋದರೂ, ತಾವು ಮಾತ್ರ ನಿವೃತ್ತಿವರೆಗೂ ಪೌರ ಕಾರ್ಮಿಕಳಾಗಿಯೇ ಸೇವೆ ಸಲ್ಲಿಸಿ, ಅದರಿಂದ ಬಂದ 30 ಲಕ್ಷ ರೂಪಾಯಿ ಬ್ಯಾಂಕ್ನಲ್ಲಿ ಇಟ್ಟಿದ್ದಾರೆ. ಈ ಹಣದಲ್ಲೇ ಬರುವ ಬಡ್ಡಿಯಲ್ಲಿ ತಮ್ಮೂರಿನ ಶಾಲೆಯ ಮಕ್ಕಳಿಗೂ ಸಹಾಯ ಮಾಡುತ್ತಿದ್ದಾರೆ.
ತಾಯಿಯ ಸಾಧನೆ ಬಗ್ಗೆ ಹೆಮ್ಮೆ ಪಡುವ ಪುತ್ರ: ತಾಯಿಯ ಕಷ್ಟವನ್ನು ಹುಟ್ಟಿನಿಂದ ನೋಡಿಕೊಂಡು ಬಂದ ನಿವೃತ್ತ ಎಸ್ಪಿ ರವಿನಾರಾಯಣ ಅಮ್ಮನ ಕಷ್ಟ ನೆನೆದು ಕಣ್ಣೀರು ಹಾಕಿದ್ದಾರೆ. ಶ್ರೀಮಂತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉನ್ನತ ಸ್ಥಾನಕ್ಕೆ ತರುವುದು ಸುಲಭ. ಓರ್ವ ಪೌರ ಕಾರ್ಮಿಕ ಮಹಿಳೆ ಅದರಲ್ಲೂ ಪತಿಯಿಲ್ಲದೆ ತಮ್ಮ ನಾಲ್ಕು ಮಕ್ಕಳನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಂದಿದ್ದು ವಿಶೇಷ ಸಾಧನೆಯೇ ಸರಿ.
ಇದೇ ಕಾರಣಕ್ಕೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವುದು ಅಲ್ಲವೇ? ಆದರೆ, ಇಲ್ಲಿ ಶೇಖಮ್ಮ ತಾವು ಓದದೇ ಇದ್ದರೂ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡಬೇಕೆಂಬ ಛಲ, ಮಕ್ಕಳ ಶ್ರೇಯೋಭಿವೃದ್ಧಿಗೆ ಕಾರಣವಾಗಿದೆ. ಈ ಮೂಲಕ ಶೇಖಮ್ಮ ಮಾದರಿ ಮಹಿಳೆಯಾಗಿ ಹೊರ ಹೊಮ್ಮಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ 54ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ