ವಿಜಯನಗರ: ನಾನು ಹೇಳಿದಂತೆ ಅಡುಗೆ ಎಣ್ಣೆ ದರ ಕಡಿಮೆಯಾಗಿದೆ. ಸಿಮೆಂಟ್, ಕಬ್ಬಿಣ, ಜಿಂಕ್ ದರ ಕೂಡಾ ಕಡಿಮೆಯಾಗಲಿದೆ, ಕಾದು ನೋಡಿ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಹರಪನಹಳ್ಳಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಆಗಲಿದೆ. ಸಿಲಿಂಡರ್ ಗ್ಯಾಸ್ ದರ ಕೂಡ ಕಡಿಮೆಯಾಗಲಿದೆ ಎಂದರು.
ದೇಶದಲ್ಲಿ ಆದಾಯ ಹೆಚ್ಚಾಗುತ್ತಿರುವ ಬೆನ್ನಲ್ಲೇ ವಸ್ತುಗಳ ದರದಲ್ಲಿ ಬೆಲೆ ಕಡಿಮೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡುವ ವಿಚಾರವನ್ನು ಪ್ರಧಾನಿ ಮೋದಿ ಹಾಗೂ ಆರ್ಥಿಕ ತಜ್ಞರು ತಿಳಿದಿರುತ್ತಾರೆ. ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಯಲ್ಲಿ ತರಲು ಪ್ರಧಾನಿ ಸಿದ್ಧರಿದ್ದರು. ಆದರೆ ಆಯಾ ರಾಜ್ಯಗಳು ಈ ಧೋರಣೆಯನ್ನು ವಿರೋಧಿಸಿದರು ಎಂದು ಹೇಳಿದರು.
ಉಪಚುನಾವಣೆಗಳಲ್ಲಿ ಸೋತ ಕಾರಣ ಯಾವುದೇ ವಸ್ತುಗಳ ದರವನ್ನು ಇಳಿಕೆ ಮಾಡಿಲ್ಲ. ಇದು ಕೇವಲ ಊಹಾಪೋಹ ಅಷ್ಟೇ ಎಂದರು.
ಇದನ್ನೂ ಓದಿ: ಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಗೆ ಪಟ್ಟು ಹಿಡಿದ ಬಳ್ಳಾರಿಯ ಜೋಡಿ