ದಾವಣಗೆರೆ: ಜಿಲ್ಲೆಯ ಹರಿಹರ ಪುರಾಣ ಪ್ರಸಿದ್ಧಿ ಪಡೆದಿರುವ ಕ್ಷೇತ್ರ. ಹರಿ - ವಿಷ್ಣು, ಹರ - ಶಿವ ಈ ಇಬ್ಬರು ದೇವರುಗಳ ಸಮ್ಮಿಲನವಾದ ಪ್ರದೇಶವೇ ಹರಿಹರ. ಹರಿಹರ ವಿಧಾನಸಭಾ ಕ್ಷೇತ್ರವಾದ ಬಳಿಕ ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತದೆ. ಕೈ, ಕಮಲ, ದಳದ ನಡುವೆ ನೇರಾನೇರ ಕಾಳಗ ನಡೆಯುತ್ತದೆ. ಕಳೆದ ಬಾರಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಈ ಬಾರಿ ಯಾರ ಕೊರಳಿಗೆ ಜಯದ ಮಾಲೆ ಎಂಬ ಚರ್ಚೆ ಶುರುವಾಗಿದೆ.
ಕ್ಷೇತ್ರದ ಐತಿಹಾಸಿಕ ಹಿನ್ನೆಲೆ: ಹರಿಹರದ ತುಂಗಾಭದ್ರ ನದಿ ಬಳಿ ಗುಹ ಎಂಬ ರಾಕ್ಷಸನ್ನು ಹರಿ - ವಿಷ್ಣು, ಹರ - ಶಿವ ಸಂಹಾರ ಮಾಡಿದ ಐತಿಹಾಸಿಕ ಕ್ಷೇತ್ರವಾಗಿದೆ. ಈಗಾಗಿಯೇ ಈ ಊರಿಗೆ ಹರಿಹರ ಎಂಬ ಹೆಸರು ಬಂದಿದೆ. ಹರಿಹರೇಶ್ವರ ದೇವಸ್ಥಾನ ಪುರಾಣ ಪ್ರಸಿದ್ದಿ ಪಡೆದಿದೆ. ಬೆಳ್ಳೂಡಿ ಕನಕಗುರು ಪೀಠ, ಪಂಚಮಸಾಲಿ ಲಿಂಗಾಯತ ಗುರು ಪೀಠ, ವಾಲ್ಮೀಕಿ ಗುರು ಪೀಠಗಳು ಶಕ್ತಿ ಕೇಂದ್ರಗಳಾಗಿವೆ. ಇಲ್ಲಿನ ರಾಜಕಾರಣ ಕೂಡ ಕುತೂಹಲ ಮೂಡಿಸುವಂತಿದೆ. ಯಾಕೆಂದರೆ, ಇಲ್ಲಿ ರಾಜ್ಯದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಧ್ಯೆ ಪೈಪೋಟಿ ಇರುತ್ತದೆ.
ಮತದಾರರ ಮಾಹಿತಿ: ಹರಿಹರ ಕ್ಷೇತ್ರದಲ್ಲಿ 2,12,129 ಮತದಾರರು ಇದ್ದಾರೆ. 1,05,644 ಪುರುಷ ಮತದಾರರು, 1,06,480 ಮಹಿಳಾ ಮತದಾರರು ಹಾಗೂ ಐವರು ಇತರ ಮತದಾರರನ್ನು ಕ್ಷೇತ್ರ ಹೊಂದಿದೆ. ಇಲ್ಲಿ ಲಿಂಗಾಯತರ ಮತಗಳೇ ನಿರ್ಣಾಯಕವಾಗಿವೆ. ಅಲ್ಲದೇ, ಕುರುಬರು ಮತ್ತು ಮುಸ್ಲಿಮರು ಪ್ರಮುಖರಾಗಿದ್ದು, ಮುಸ್ಲಿಮರ ಮತಗಳ ಮೇಲೆ ಕಾಂಗ್ರೆಸ್, ಜೆಡಿಎಸ್ ಸಾಮಾನ್ಯವಾಗಿ ಕಣ್ಣಿಟ್ಟಿರುತ್ತವೆ.
ಕಳೆದ ಮೂರು ಚುನಾವಣೆಗಳ ಇತಿಹಾಸ: ಜಿಲ್ಲೆಯಲ್ಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಏಕೈಕ ಕ್ಷೇತ್ರ ಹರಿಹರ. 2008ರ ಚುನಾವಣೆಯಲ್ಲಿ ಈ ಕ್ಷೇತ್ರ ಬಿಜೆಪಿ ವಶವಾಗಿತ್ತು. ಬಿಜೆಪಿ ಅಭ್ಯರ್ಥಿ ಬಿ ಪಿ ಹರೀಶ್ 47,353 ಮತ ಪಡೆದು ಜೆಡಿಎಸ್ ಅಭ್ಯರ್ಥಿ ಹೆಚ್ಎಸ್ ಶಿವಶಂಕರ್ ವಿರುದ್ಧ ಜಯ ಗಳಿಸಿದ್ದರು. ಜೆಡಿಎಸ್ನ ಶಿವಶಂಕರ್ 36,297 ಮತ ಪಡೆದು ಸೋಲುಂಡಿದ್ದರು. ಕಾಂಗ್ರೆಸ್ ಪಕ್ಷ ಇಲ್ಲಿ ಹೀನಾಯ ಸೋಲು ಕಂಡಿತ್ತು.
2013ರ ಚುನಾವಣೆಯಲ್ಲಿ ಕ್ಷೇತ್ರವು ಜೆಡಿಎಸ್ ಪಾಲಾಗಿತ್ತು. ಕಳೆದ ಬಾರಿ ಸೋಲು ಕಂಡಿದ್ದ ಹೆಚ್ಎಸ್ ಶಿವಶಂಕರ್ 59,666 ಮತ ಪಡೆದು ಜಯ ದಾಖಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಸ್.ರಾಮಪ್ಪ 40,613 ಮತಗಳೊಂದಿಗೆ ಎರಡನೇ ಪಡೆದಿದ್ದರು. ಬಿಜೆಪಿ ಮತ್ತು ಕೆಜೆಪಿ ಅಭ್ಯರ್ಥಿಗಳು ಸೋತಿದ್ದರು.
2008ರಲ್ಲಿ ಬಿಜೆಪಿ ಮತ್ತು 2013ರ ಚುನಾವಣೆಯಲ್ಲಿ ಜೆಡಿಎಸ್ ಆಯ್ಕೆ ಮಾಡಿದ್ದ ಮತದಾರರು, 2018ರಲ್ಲಿ ಕಾಂಗ್ರೆಸ್ನ ಕೈ ಹಿಡಿದಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರಾಮಪ್ಪ 64,801 ಮತ ಪಡೆದು ಗೆಲುವಿನ ನಗೆ ಬೀರಿದ್ದರು. ಬಿಜೆಪಿ ಅಭ್ಯರ್ಥಿ ಬಿ ಪಿ ಹರೀಶ್ 57,541 ಮತಗಳನ್ನು ಪಡೆದು ಸೋಲುಂಡಿದ್ದರು. ಜೆಡಿಎಸ್ ನಿರೀಕ್ಷಿತ ಮತಗಳನ್ನು ಪಡೆದಿರಲಿಲ್ಲ.
ಬಿಜೆಪಿ - ಕಾಂಗ್ರೆಸ್ನಲ್ಲಿ ಟಿಕೆಟ್ ಪೈಪೋಟಿ: ಮೂರು ಪಕ್ಷಗಳ ಸಮಾನದ ಹೋರಾಟ ಕಂಡಿರುವ ಹರಿಹರಿದಲ್ಲಿ ಈಗಾಗಲೇ ಜೆಡಿಎಸ್ ಪಕ್ಷದಿಂದ ಈಗಾಗಲೇ ಮಾಜಿ ಶಾಸಕ ಹೆಚ್ಎಸ್ ಶಿವಶಂಕರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಕಾಂಗ್ರೆಸ್ನಲ್ಲಿ ಹಾಲಿ ಶಾಸಕರು ಇದ್ದರೂ, ಟಿಕೆಟ್ಗಾಗಿ ಪೈಪೋಟಿ ಉಂಟಾಗಿದೆ.
ಶಾಸಕ ಎಸ್.ರಾಮಪ್ಪ ಅವರೊಂದಿಗೆ ಎಂ.ನಾಗೇಂದ್ರಪ್ಪ, ಯುವ ನಾಯಕ ನಂದಿಗಾವಿ ಶ್ರೀನಿವಾಸ್, ಎಸ್.ದೇವೇಂದ್ರಪ್ಪ, ಹೆಚ್ ಮಹೇಶಪ್ಪ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ಕೊಂಡಜ್ಜಿ, ಗೋವಿಂದ ರೆಡ್ಡಿ, ಎಂ.ಬಾಬುಲಾಲ್, ಕೃಷ್ಣ ಸಾ ಭೂತೆ, ಮಹೇಶಪ್ಪ ಹೆಚ್ ಹೀಗೆ ಒಟ್ಟು 10 ಜನ ಟಿಕೆಟ್ ಆಕಾಂಕ್ಷಿಗಳಿದ್ದು, ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಜೋರಾಗಿದೆ. ಮಾಜಿ ಶಾಸಕ ಬಿಪಿ ಹರೀಶ್, ಚಂದ್ರಶೇಖರ್ ಪೂಜಾರ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಈ ಬಾರಿ ಆಮ್ ಆದ್ಮಿ ಪಾರ್ಟಿಯಿಂದ ಮಲ್ಲಿನಾಥ್ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ