ದಾವಣಗೆರೆ : ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಭಾಗದಲ್ಲಿ ವಿಶೇಷವಾಗಿ ಆಚರಿಸುವ ಹಬ್ಬವೆಂದರೆ ಅದು ಅಜ್ಜಿಹಬ್ಬ, ಇಂದು ಸಹ ಕೆಲವು ಹಳ್ಳಿಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಅಂತೆಯೇ ಈ ಅಜ್ಜಿ ಹಬ್ಬಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಹಿಂದೆ ಸರಿಯಾಗಿ ಮಳೆಯಾಗದೆ, ರೋಗ ರುಜಿನಗಳಿಂದ ಜನ ಜಾನುವಾರುಗಳಿಗೆ ಯಾವುದೇ ರೋಗಗಳು ಬರದಂತೆ ಹಾಗೂ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂಬ ಉದ್ದೇಶದಿಂದ ಅಜ್ಜಿ ಅಮ್ಮನ ಹಬ್ಬವನ್ನು ಆಚರಿಸುತ್ತಿದ್ದರು. ಈಗಲೂ ಸಹ ಈ ಹಬ್ಬವನ್ನು ಈ ಭಾಗದ ಪ್ರತಿ ಹಳ್ಳಿಗಳನ್ನು ಆಚರಿಸಲಾಗುತ್ತಿದೆ. ಹಲವು ಕಡೆ ಆಷಾಢ ಮಾಸದಲ್ಲಿ ಅಜ್ಜಿ ಅಮ್ಮನ ಹಬ್ಬವನ್ನು ಮಾಡುತ್ತಾರೆ, ಆದರೆ ವಿಶೇಷವಾಗಿ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಶ್ರಾವಣ ಮಾಸದಲ್ಲಿ ಈ ಹಬ್ಬವನ್ನು ಆಚರಿಸುವುದು ವಿಶೇಷ.
ಹಬ್ಬದ ದಿನದಂದು ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ಹಬ್ಬ ಆಚರಿಸಿ, ಎಲ್ಲಾ ದೇವಸ್ಥಾನಗಳಲ್ಲೂ ದೇವರಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಮಾಡಲಾಗುತ್ತೆ. ಹಬ್ಬದ ದಿನ ಒಂದು ಮರದಲ್ಲಿ ಅಜ್ಜಿ ಅಮ್ಮನ ಕುಡಿಕೆ, ಬೇವಿನ ಸೊಪ್ಪು, ದೇವಿಗೆ ಇಷ್ಟವಾದ ಹೋಳಿಗೆ ಎಡೆ ಇಟ್ಟು ಹಣ್ಣು ಕಾಯಿ ಇಟ್ಟು ಪೂಜೆಯನ್ನು ಮಾಡಲಾಗುತ್ತೆ. ನಂತರ ಅಜ್ಜಿ ಅಮ್ಮ ನಮ್ಮ ಕುಟುಂಬಕ್ಕೆ ಯಾವುದೇ ರೋಗಗಳು ಬರದೇ ಇರಲಿ ಎಂದು ಬೇಡಿಕೊಂಡು ಅಮ್ಮ ಇರುವ ಮರವನ್ನು ಗ್ರಾಮದ ಪಾದಗಟ್ಟೆ ಹತ್ತಿರ ತಂದು ಇಟ್ಟು ಪೂಜಿಸಲಾಗುತ್ತೆ. ಸಂಜೆ ಊರಿನ ಗ್ರಾಮಸ್ಥರು ವಿವಿಧ ವಾದ್ಯಗಳೊಂದಿಗೆ ಅಜ್ಜಿ ಅಮ್ಮನ ಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಪಾದಗಟ್ಟೆ ಹತ್ತಿರ ಬರುತ್ತಾರೆ. ನಂತರ ಉಚ್ಚಂಗೆಮ್ಮನ ಪಾದಗಟ್ಟೆಗೆ ಪೂಜೆಯನ್ನು ಮಾಡಿ ಅಜ್ಜಿ ಅಮ್ಮನ ಮರಗಳನ್ನ ಊರಿನ ಗಡಿಯಾಚೆ ಇಟ್ಟು ಪೂಜೆ ಸಲ್ಲಿಸಿ ಬರುವುದು ವಿಶೇಷ.