ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್ ಗದ್ದುಗೆ ಹಿಡಿಯಲು "ಟೂರ್ ಪಾಲಿಟಿಕ್ಸ್' ಶುರುವಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ನ ಮಹಾನಗರ ಪಾಲಿಕೆಯ ಸದಸ್ಯರು ಪ್ರವಾಸ ತಾಣಗಳಿಗೆ ಹಾಗೂ ಇತರ ತಾಣಗಳಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದಾರೆ. ಕೆಲವರು ರೆಸಾರ್ಟ್ ರಾಜಕೀಯ ಶುರುವಾಗಿದೆ ಎಂದು ಗುಲ್ಲೆಬ್ಬಿಸಿದ್ದಾರೆ.
ಪಾಲಿಕೆಯಲ್ಲಿ ಕಾಂಗ್ರೆಸ್ 22, ನಾಲ್ವರು ಪಕ್ಷೇತರರ ಬೆಂಬಲ ಸೇರಿ ಬಿಜೆಪಿ 21 ಸದಸ್ಯ ಬಲ ಹೊಂದಿದ್ದರೆ, ಜೆಡಿಎಸ್ನ ಒಬ್ಬ ಸದಸ್ಯೆ, ಪಕ್ಷೇತರ ಅಭ್ಯರ್ಥಿ ಉದಯ್ ಕುಮಾರ್ ಶೆಟ್ಟಿ ಯಾರ ಪರ ನಿಲ್ಲುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ. ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಯರ್ ಪಟ್ಟಕ್ಕೆ ಫೈಟ್ ಜೋರಾಗಿದೆ.
ಶತಾಯಗತಾಯ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ತಂತ್ರಗಾರಿಕೆ ರೂಪಿಸಿದ್ದರೆ, ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸಹ ಮೇಯರ್ ಪಟ್ಟಕ್ಕಾಗಿ ಪ್ರತಿರಣತಂತ್ರ ರೂಪಿಸಿದೆ. ಫೆಬ್ರವರಿ 19 ರಂದು ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಯಾರು ಬೆಣ್ಣೆನಗರಿಯ ಪಾಲಿಕೆ ಪಟ್ಟ ಅಲಂಕರಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಆದ್ರೆ ದಿನಕ್ಕೊಂದು ತಾಣಕ್ಕೆ ಹೋಗುವ ಮೂಲಕ ಯಾರ ಕೈಗೆ ಸಿಗದಂತೆ ಮೇಯರ್ ಚುನಾವಣೆ ನಡೆಯುವ ದಿನ ನೇರವಾಗಿ ಪಾಲಿಕೆಗೆ ಬರುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.