ದಾವಣಗೆರೆ: ಜಿಲ್ಲೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ಅಪ್ಪಳಿಸುತ್ತಿದೆ.
ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ 256 ಮಕ್ಕಳ ಪೈಕಿ ಬಹುತೇಕರಿಗೆ ಕೋವಿಡ್ ಟೆಸ್ಟ್ ಮಾಡಿದ್ದು ಪ್ರಾಚಾರ್ಯರು ಸೇರಿ 55 ಮಕ್ಕಳಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಇವರಲ್ಲಿ ಎಂಟು ಮಕ್ಕಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮಕ್ಕಳಿಗೆ ಶಾಲೆಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಈಗ ಈ ಶಾಲೆಯಲ್ಲಿ 256 ಮಕ್ಕಳಿದ್ದಾರೆ. ಸದ್ಯ 190 ಮಕ್ಕಳ ಕೋವಿಡ್ ಟೆಸ್ಟ್ ನಡೆದಿದೆ. ನಿನ್ನೆ, ಇಂದು ಸೇರಿ 55 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಇಡೀ ವಸತಿ ಶಾಲೆಯನ್ನು ತಮ್ಮ ವಶಕ್ಕೆ ಪಡೆದು ಮಕ್ಕಳ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಸ್ಥಳಕ್ಕೆ ಸ್ಥಳೀಯ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಭೇಟಿ ನೀಡಿ ಅಗತ್ಯ ವಸ್ತುಗಳ ಪೂರೈಕೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಗಳೂರು ತಾಲೂಕಿನ ಬಹುತೇಕ ಕಡೆ ಇರುವ ವಿಂಡ್ ಮಿಲ್ ಫ್ಯಾನ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 17 ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಜಗಳೂರು ಪಟ್ಟಣದ ಎನ್ಎಂಕೆ ಶಾಲೆಯ ಆರು ಮಕ್ಕಳಿಗೆ ಸೋಂಕು ತಗುಲಿದ್ದು ಶಾಲೆಯನ್ನು ಸೀಲ್ಡೌನ್ ಮಾಡಲಾಗಿದೆ.
ನಿಟ್ಟುವಳ್ಳಿಯ ಮಾರುತಿ ಶಾಲೆಯಲ್ಲಿ 6, ಅವರಗೊಳ್ಳ, ವಡ್ಡಿನಹಳ್ಳಿ ಶಾಲೆಯಲ್ಲಿ ತಲಾ ಇಬ್ಬರು, ಜಗಳೂರು ಗವಿಸಿದ್ದೇಶ್ವರ ಶಾಲೆಯಲ್ಲಿ 3 ಮಕ್ಕಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 71 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಈಗ ಕೆಲವು ಮಕ್ಕಳಲ್ಲಿ ಕೋವಿಡ್ ಬಂದಿದೆ. ಇದನ್ನೇ ಕಾರಣವಾಗಿಟ್ಟುಕೊಂಡು ಶಾಲೆಗೆ ರಜೆ ನೀಡುವುದು ಸೂಕ್ತವಲ್ಲ ಎಂದು ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಇದನ್ನೂ ಓದಿ: ಬೆಳಗಾವಿ: ಕಟ್ಟಡ ಕಾರ್ಮಿಕನ ಬರ್ಬರ ಹತ್ಯೆ, ರಸ್ತೆಬದಿ ಶವ ಪತ್ತೆ