ಪುತ್ತೂರು(ದಕ್ಷಿಣ ಕನ್ನಡ): ಗ್ರಾಮ ಪಂಚಾಯಿತಿ ಲೆಕ್ಕ ಪತ್ರಗಳ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ, ಶಿಷ್ಟಾಚಾರ ಪಾಲಿಸದೇ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಶಿರಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಶಿರಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಅಮಾನತುಗೊಂಡವರು. ಪಿಡಿಒ ನಡೆಸಿರುವ ಅವ್ಯವಹಾರಗಳ ಸಂಬಂಧ ಗ್ರಾಮಸ್ಥರು ಸೇರಿದಂತೆ ಹಲವರು ದೂರುಗಳು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡವು ದೂರುಗಳಲ್ಲಿನ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಈ ತನಿಖಾ ವರದಿಯಲ್ಲಿ ಪಿಡಿಒ ಕರ್ತವ್ಯಲೋಪ ಎಸಗಿರುವುದು ಕಂಡುಬಂದ ಕಾರಣ ಅಮಾನತುಗೊಳಿಸಲಾಗಿದೆ.
ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿ, ಅಂಗವಿಕಲರ ನಿಧಿ ಬಳಕೆ, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿನ ಸಿಸಿ ಕ್ಯಾಮರಾ ಖರೀದಿ ಸೇರಿದಂತೆ ಹಲವು ಯೋಜನೆಗಳಲ್ಲಿ ಪಿಡಿಒ ಕರ್ತವ್ಯಲೋಪ ಎಸಗಿರುವ ಆರೋಪಗಳು ಸಾಬೀತಾಗಿದೆ. ಈ ಆರೋಪಗಳ ಬಗ್ಗೆ ಸಮಗ್ರ ವಿಚಾರಣೆ ನಡೆಸುವ ಸಲುವಾಗಿ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸರ್ಕಾರಿ ನಿಯಮನುಸಾರ ಪಿಡಿಒ ವೆಂಕಟೇಶ್ರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಆದೇಶಿಸಿದ್ದಾರೆ.
ಇದನ್ನೂ ಓದಿ: ರೈತನಿಂದ ಹಣ ಸುಲಿಗೆ ಮಾಡಿ ನಂದಿಬೆಟ್ಟಕ್ಕೆ ಹೋಗಿ ಎಂಜಾಯ್ ಮಾಡಿದ್ದ ಯುವಕರು ಅರೆಸ್ಟ್