ಬಂಟ್ವಾಳ/ಮಂಗಳೂರು: ಅವಿವಾಹಿತ ಅಣ್ಣ- ತಂಗಿ ಇಬ್ಬರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ರಾತ್ರಿ ಬಂಟ್ವಾಳ ತಾಲೂಕಿನ ಸಂಗಬೆಟ್ಟುವಿನಲ್ಲಿ ಸಂಭವಿಸಿದೆ.
ಇಲ್ಲಿನ ನಿವಾಸಿಗಳಾದ ನೀಲಯ್ಯ ಶೆಟ್ಟಿಗಾರ್ (42) , ಕೇಸರಿ ( 39) ಮೃತ ದುರ್ದೈವಿಗಳು. ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದು, ರಾತ್ರಿ ಸುಮಾರು 11 ಗಂಟೆಯ ಬಳಿಕ ತಮ್ಮ ಮನೆಯ ಕೊಠಡಿಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಕ್ಕದ ರೂಮಿನಲ್ಲಿ ಮಲಗಿದ್ದ ನೀಲಯ್ಯ ಅವರ ಸಹೋದರ ಮತ್ತು ಅವರ ಪತ್ನಿ, ಮಗ ನರಳಾಟದ ಶಬ್ದ ಕೇಳಿ ಎದ್ದು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಸೇರಿ ಇಬ್ಬರನ್ನೂ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಆಸ್ಪತ್ರೆ ತಲುಪುವ ಮೊದಲೇ ಇಬ್ಬರೂ ಮೃತಪಟ್ಟಿದ್ದರು ಎನ್ನಲಾಗಿದೆ.
ಮಾಹಿತಿ ತಿಳಿದ ಬಂಟ್ವಾಳ ಗ್ರಾಮಾಂತರ ಎಸ್ಐ ಪ್ರಸನ್ನ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ನೀಲಯ್ಯ ಈ ಹಿಂದೆ ಕೈಮಗ್ಗ ನಡೆಸುತ್ತಿದ್ದು, ಅನಾರೋಗ್ಯದ ಕಾರಣ ಅದನ್ನು ನಿಲ್ಲಿಸಿದ್ದರು ಎಂದು ತಿಳಿದು ಬಂದಿದೆ.