ಮಂಗಳೂರು: ಕರಾವಳಿ ಭಾಗಕ್ಕೆ ಸಂಬಂಧಿಸಿದಂತೆ ತಕ್ಷಣ ಪ್ರವಾಸಿಗರ ಆಕರ್ಷಣೆಗೆ ಅಗತ್ಯವಿರುವ ನದಿ ಉತ್ಸವ, ಗಾಳಿಪಟ ಉತ್ಸವ, ಸರ್ಫಿಂಗ್ ಉತ್ಸವದಂತಹ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಯೋಜಿಸಿದ್ದಲ್ಲಿ, ಅದಕ್ಕೆ ಉತ್ತೇಜನ ನೀಡಲು ಪ್ರವಾಸೋದ್ಯಮ ಇಲಾಖೆ ಬದ್ಧವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಭರವಸೆ ನೀಡಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕಂಬಳ ಉತ್ತೇಜನಕ್ಕೆ ದ.ಕ. ಜಿಲ್ಲೆ ಹಾಗೂ ಉಡುಪಿಯ ಜಿಲ್ಲಾಧಿಕಾರಿಗಳಿಗೆ ತಲಾ 50 ಲಕ್ಷ ರೂ. ಗಳ ಚೆಕ್ ವಿತರಣೆ ಮಾಡಿ ಬಳಿಕ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ನಡೆದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಎಲ್ಲಾ ಉತ್ಸವಗಳನ್ನು ಉತ್ತಮವಾಗಿ ಆಯೋಜಿಸಿದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಕೇರಳ ಮಾದರಿಯ ಬೋಟ್ ಹೌಸ್ಗಳನ್ನು ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಬದಲಾಗಿ ಖಾಸಗಿಯಾಗಿ ಯಾರಾದರೂ ಮುಂದೆ ಬಂದಲ್ಲಿ ನಾವು ಅದಕ್ಕೆ ಸಬ್ಸಿಡಿ ನೀಡುತ್ತೇವೆ. ನದಿಗೆ ಕೊಳಚೆ ನೀರು ಹರಿಯದಂತೆಯೂ ಕೈಗಾರಿಕೆಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ಅಲ್ಲದೇ ಈಗ ಇರುವ ಹೆಚ್ಚಿನ ಸಂಖ್ಯೆಯಲ್ಲಿ ಕ್ರೂಸ್ಗಳನ್ನು ಆರಂಭಿಸಿದಲ್ಲಿ ಅದರ ನಿಲುಗಡೆಗೆ ಬೇಕಾಗಿರುವ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಕೇವಲ ಎರಡು ಮೂರು ಕ್ರೂಸ್ಗಳಿಗಿಂತ 20-30 ರಷ್ಟು ಕ್ರೂಸ್ಗಳನ್ನು ಎಲ್ಲರೂ ಸೇರಿ ಆರಂಭಿಸಿದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಾಯವಾಗುತ್ತದೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ನಿಸರ್ಗ ಮಂಜುನಾಥ್ ಮಾತನಾಡಿ, ಪಿಲಿಕುಳ ನಿಸರ್ಗಧಾಮ ಫೋಕಸ್ ಆಗಬೇಕು. ಕರಾವಳಿಯ ಪ್ರವಾಸೋದ್ಯಮವನ್ನು ಪ್ರವಾಸಿಗರಿಗೆ ಆಕರ್ಷಣೆ ಮಾಡಿಸುವ ಕಾರ್ಯವಾಗಬೇಕು. ಮಂಗಳೂರಿನಲ್ಲಿ ರೈನ್ ಫೆಸ್ಟಿವಲ್ ಆಯೋಜಿಸಬೇಕು. ಲೇಸರ್ ಶೋ, ಮ್ಯೂಸಿಕ್ ಫೌಂಟೈನ್ಗೆ ಉತ್ತೇಜನ ನೀಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಿಲಿಕುಳ ನಿಸರ್ಗಧಾಮವು ಪ್ರಾಧಿಕಾರವಾಗಿ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಅಲ್ಲದೆ ಪಿಲಿಕುಳವನ್ನು ಬ್ರ್ಯಾಂಡಿಂಗ್ ಮಾಡುವ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆಯಿಂದ ಚರ್ಚೆ ಮಾಡಿ, ಬಳಿಕ ಅದನ್ನು ಯಾವ ರೀತಿ ಕಾರ್ಯರೂಪಕ್ಕೆ ತರವುದು ಎಂಬುದರ ಬಗ್ಗೆಯೂ ಚಿಂತನೆ ಮಾಡಲಾಗುತ್ತದೆ. ಈ ಮೂಲಕ ಏಕರೂಪದ ತೆರಿಗೆ ಜಾರಿಯಾಗಲಿದೆ ಎಂದು ತಿಳಿಸಿದರು.
ಬೀಚ್ಗಳಲ್ಲಿ ಸಂಜೆ 6ರ ಬಳಿಕ ಪೊಲೀಸರು ಪ್ರವಾಸಿಗರನ್ನು ಬೆದರಿಸಿ ಓಡಿಸುತ್ತಾರೆ. ಇದರಿಂದ ಪ್ರವಾಸೋದ್ಯಮ ಬೆಳೆಯಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಸಚಿವ ಯೋಗೇಶ್ವರ್ ಪ್ರವಾಸಿಗರಿಗೆ ಪೊಲೀಸರೇ ಗೈಡ್ ಮಾಡುವ ರೀತಿಯಲ್ಲಿ ಬೇರೆ ಕೆಲವೊಂದು ದೇಶಗಳಲ್ಲಿ ವ್ಯವಸ್ಥೆ ಇದೆ. ಆದ್ದರಿಂದ ನಮ್ಮಲ್ಲೂ ಕನಿಷ್ಠ ಪಕ್ಷ ಬೀಚ್ ಪಕ್ಕ ಇರುವ ಠಾಣೆಯ ಪೊಲೀಸರಾದರೂ ಪ್ರವಾಸಿ ಸ್ನೇಹ ಪೊಲೀಸ್ ವ್ಯವಸ್ಥೆಗೆ ಹೆಚ್ಚು ಒತ್ತು ಕೊಡುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿಗೆ ಹೋಮ್ ಸ್ಟೇಗಳು ಅಗತ್ಯ. ಆದರೆ ಪೊಲೀಸ್ ಇಲಾಖೆಯ ತೊಂದರೆಗಳಿಗೆ ಬೇಸತ್ತು ಬಹಳಷ್ಟು ಹೋಮ್ ಸ್ಟೇಗಳನ್ನು ಮುಚ್ವಲಾಗುತ್ತಿದೆ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ, ಈ ಸಮಸ್ಯೆಗಳನ್ನು ಪರಿಹರಿಸಲು ಪ್ರವಾಸೋದ್ಯಮ ಇಲಾಖೆ ಪೊಲೀಸರೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತದೆ. ಅಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು, ಅಪರಾಧಿ ಚಟುವಟಿಕೆಗಳು ನಡೆಯದಿದ್ದಲ್ಲಿ ನಾವೇ ನಿಂತು ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಎಂದು ಅಭಯ ನೀಡಿದರು.
ನದಿ ಬದಿಯಲ್ಲಿ ಬೋಟಿಂಗ್ ಮಾಡಿರುವ ಮಾಲೀಕರು ಪೊಲೀಸರಿಂದ ಹಫ್ತಾ ತೊಂದರೆ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿ ಕಚೇರಿಯಿಂದ ಪದೇಪದೇ ತೊಂದರೆಗಳಾಗುತ್ತಿವೆ. ಇದರಿಂದ ಲಕ್ಷಗಟ್ಟಲೆ ಖರ್ಚು ಮಾಡಿ ಬೋಟಿಂಗ್ ನಿಂದ ವಿಮುಖರಾಗುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು. ಆಗ ಸಚಿವರು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಕ್ಷಣ ಅವರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.