ಮಂಗಳೂರು : ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಹಲವೆಡೆ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ. ಹೀಗಾಗಿ ಕೋವಿಡ್ ಲಕ್ಷಣಗಳಿಲ್ಲದ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ಸರ್ಕಾರ ಚಿಂತಿಸುತ್ತಿದೆ. ಈ ನಡುವೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶ ನೀಡಲಾಗಿದ್ದು, ಗುಣಮಟ್ಟದ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಸಜ್ಜಾಗಿವೆ.
ಕೊರೊನಾ ವೈರಸ್ಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿದೆ. ಆದರೆ, ದಿನ ಕಳೆದಂತೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಲವೆಡೆ ಆಸ್ಪತ್ರೆಗಳು ತುಂಬಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಯಾಗಿರುವ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿಯೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ನಡುವೆ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ಅವಕಾಶ ನೀಡಿರುವುದರಿಂದ ಮಂಗಳೂರಿನಲ್ಲಿ ಹಲವು ಖಾಸಗಿ ಆಸ್ಪತ್ರೆಗಳು ಇದಕ್ಕಾಗಿ ಸಜ್ಜಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಕೊರೊನಾ ರೋಗಿಗಳಿಗೆ ಜಾಗವಿಲ್ಲದಿದ್ದರೆ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ಸಂದರ್ಭದಲ್ಲಿ ರೋಗಿಗಳು ಖಾಸಗಿ ಆಸ್ಪತ್ರೆಗೆ ಬಿಲ್ ಪಾವತಿಸಬೇಕಿಲ್ಲ. ರೋಗಿಗಳ ಬಿಲ್ಅನ್ನು ಸರ್ಕಾರವೇ ಭರಿಸಲಿದೆ.
ಒಂದು ವೇಳೆ ಕೊರೊನಾ ಸೋಂಕಿತರು ಖಾಸಗಿ ಆಸ್ಪತ್ರೆ ಬೇಕೆಂದು ತಾವೇ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಆಸ್ಪತ್ರೆ ಖರ್ಚನ್ನು ಅವರೇ ಪಾವತಿಸಬೇಕಾಗುತ್ತದೆ. ಈಗಾಗಲೇ ಮಂಗಳೂರಿನಲ್ಲಿ ಸಾಕಷ್ಟು ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗಿಂತ ಉತ್ತಮ ಸೇವೆ ನೀಡಲು ಮುಂದಾಗಿವೆ. ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗಿಂತ ಸುಧಾರಿತ ಐಸಿಯು, ತಜ್ಞ ವೈದ್ಯರು ಮತ್ತು ವೆಂಟಿಲೇಟರ್ ವ್ಯವಸ್ಥೆ ಖಾಸಗಿ ಆಸ್ಪತ್ರೆಗಳಲ್ಲಿ ಇದೆ. ಗಂಭೀರ ಕೊರೊನಾ ಸೋಂಕಿತರಿಗೆ ಬೇಕಾಗುವ ಐಸಿಯು, ವೆಂಟಿಲೇಟರ್ ಜೊತೆಗೆ ರೋಗಿಗೆ ಕಿಡ್ನಿ, ಹೃದಯ, ಶ್ವಾಸಕೋಶ ಮೊದಲಾದ ಸಮಸ್ಯೆ ಕಾಣಿಸಿಕೊಂಡರೆ ತಜ್ಞ ವೈದ್ಯರುಗಳು ಖಾಸಗಿ ಆಸ್ಪತ್ರೆಗಳಲ್ಲಿ ಇರುವುದರಿಂದ, ರೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂಬುದು ಖಾಸಗಿ ಆಸ್ಪತ್ರೆ ಮಾಲೀಕರ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಯೂಸುಫ್ ಆಲಿ ಕುಂಬ್ಳೆ ಅವರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಖಾಸಗಿ ಆಸ್ಪತ್ರೆಗಳಿದ್ದು, ಇಲ್ಲಿನ ಹಲವು ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಕೆಲವು ಆಸ್ಪತ್ರೆಗಳಿಗೆ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಬೇಡ ಎಂದು ಬಂದವರಿದ್ದಾರೆ. ಒಟ್ಟಿನಲ್ಲಿ ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಜಾಗವಿಲ್ಲದಿದ್ದರೆ, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸಿದ್ಧವಾಗಿವೆ.