ಮಂಗಳೂರು: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ್ಯ ಅವರನ್ನು ಮತ್ತು ಬಿಲ್ಲವ ಸಮುದಾಯವನ್ನು ಅವಹೇಳನ ಮಾಡಿದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಗರಡಿಗೆ ತೆರಳಿ ತಪ್ಪುಕಾಣಿಕೆ ಹಾಕಿ ಕ್ಷಮೆಯಾಚನೆ ಮಾಡಿದ್ದಾರೆ. ಹೀಗಾಗಿ ಅವರ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ನೀಡುವೆ ಎಂದು ಕರೆ ನೀಡಿದ್ದ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಆ ಘೋಷಿತ ಹಣವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವುದಾಗಿ ಹೇಳಿದ್ದಾರೆ.
ಜನಾರ್ದನ ಪೂಜಾರಿ ಕಾಲು ಹಿಡಿಯುವುದಿಲ್ಲ ಎಂದು ಧಾರ್ಮಿಕ ಸಭೆಯೊಂದರಲ್ಲಿ ಭಾಷಣ ಮಾಡಿದ ಬಳಿಕ, ಯುವಕನೊಬ್ಬನು ಮಾಡಿದ ಫೋನ್ ಕರೆಯಲ್ಲಿ ಸಂಯಮದಿಂದಲೇ ಜಗದೀಶ್ ಅಧಿಕಾರಿ ಸೃಷ್ಟೀಕರಣ ನೀಡಿದ್ರು. ನಂತರ ಫೋನ್ ಕರೆ ಕಡಿತವಾಗಿದೆ ಎಂದು ಭಾವಿಸಿ ಕರಾವಳಿಯ ವೀರಪುರುಷರಾದ ಆರಾಧ್ಯ ದೈವ ಕೋಟಿ ಚೆನ್ನಯ್ಯ ಮತ್ತು ಬಿಲ್ಲವ ಸಮುದಾಯಕ್ಕೆ ಅಪಮಾನಕಾರಿಯಾಗಿ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಮಾತಾಡಿದ್ದರು. ಆದರೆ ಇದನ್ನು ಫೋನ್ ಕರೆ ಮಾಡಿದ ಯುವಕ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದರು. ಇದರಿಂದಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಇದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಅವರು, ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿಯುವವರಿಗೆ 1 ಲಕ್ಷ ರೂಪಾಯಿ ಘೋಷಣೆ ಮಾಡಿದ್ದರು. ಜಗದೀಶ್ ಅಧಿಕಾರಿ ಅವರು ಗರಡಿಗೆ ಹೋಗಿ ತಪ್ಪುಕಾಣಿಕೆ ಹಾಕಿ ಕ್ಷಮೆಯಾಚಿಸಿದ ಹಿನ್ನೆಲೆ , ಫೇಸ್‌ಬುಕ್ ಲೈವ್ ನಲ್ಲಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಮಾತನಾಡಿದ್ದು, ಅವರು ಕ್ಷಮೆಯಾಚಿಸಿರುವುದರಿಂದ ಬಿಲ್ಲವ ಸಮುದಾಯ ಕ್ಷಮಿಸಬೇಕು. ಅವರ ಮುಖಕ್ಕೆ ಮಸಿ ಬಳಿದವರಿಗೆ ಎಂದು ಘೋಷಿಸಲಾದ ಬಹುಮಾನದ ಹಣವನ್ನು ಗೆಜ್ಜೆಗಿರಿಯಲ್ಲಿ ಬಡಮಕ್ಕಳ ಶಿಕ್ಷಣಕ್ಕೆ ನೀಡಲಾಗುವುದು ಎಂದು ಘೋಷಿಸಿದರು.
ಮೂರು ದಿನದೊಳಗೆ ಉಚ್ಚಾಟಿಸಿ- ಬಿಜೆಪಿಗೆ ವಾರ್ನಿಂಗ್!
ಇದೇ ವೇಳೆ ಬಿಜೆಪಿಯಿಂದ ಅವರನ್ನು ಮೂರು ದಿನದಲ್ಲಿ ಉಚ್ಚಾಟಿಸಬೇಕು. ಇಲ್ಲದಿದ್ದರೆ ನಾಲ್ಕನೇ ದಿನ ಬಿಜೆಪಿ ಕಚೇರಿಯ ಮುಂದೆ ಬಿಲ್ಲವರು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ರು.
ಇದನ್ನೂ ಓದಿ: ಕೋಟಿ ಚೆನ್ನಯರಿಗೆ ಅಪಮಾನ.. ತಪ್ಪು ಕಾಣಿಕೆ ಹಾಕಿದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ..