ಹುಬ್ಬಳ್ಳಿ: ಕೊರೊನಾ ಸೋಂಕಿತರನ್ನು ಹೊರತುಪಡಿಸಿ ವಯೋಸಹಜ ಕಾಯಿಲೆಗಳಿಂದ ಆಸ್ಪತ್ರೆಗಳಿಗೆ ಬರುತ್ತಿರುವ ರೋಗಿಗಳಿಗೆ ಸರಿಯಾದ ಉಪಚಾರ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ (ಸಿಸಿಸಿ) ಈ ಸಮಸ್ಯೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಉತ್ತರ ಕರ್ನಾಟಕದಲ್ಲಿ ಕೊರೊನಾ ರೋಗ ತಡೆಗಟ್ಟುವಲ್ಲಿ ಕಿಮ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಅದ್ರೆ ಹೊರ ರೋಗಿಗಳ ಚಿಕಿತ್ಸೆಗೆ ಸರಿಯಾಗಿ ವೈದ್ಯಕೀಯ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂಬ ಆರೋಪವಿದೆ. ಕಿಮ್ಸ್ನಲ್ಲಿ ಕೋವಿಡ್ ನಿವಾರಣೆಗಷ್ಟೇ ಗಮನ ನೀಡುವ ವೈದ್ಯಕೀಯ ಸಿಬ್ಬಂದಿ, ರಕ್ತದೊತ್ತಡ, ಮಧುಮೇಹ ತಪಾಸಣೆಗೆ ಮಹತ್ವ ನೀಡುತ್ತಿಲ್ಲ. ವಯೋಸಹಜ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ.
ಆದರೆ ಈ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಮಾತನಾಡಿ, ಕೊರೊನಾ ಗುಣಲಕ್ಷಣವಿರುವವರನ್ನು ಆರೈಕೆ ಮಾಡಲಾಗುತ್ತಿದೆ. ಈ ನಡುವೆ ಮಧುಮೇಹ, ರಕ್ತದೊತ್ತಡ ಸೇರಿದಂತೆ ಉಳಿದ ಕಾಯಿಲೆಗಳ ತಪಾಸಣೆಯನ್ನೂ ಮಾಡಲಾಗುತ್ತಿದೆ. ಆದರೆ ಸಣ್ಣ-ಪುಟ್ಟ ಕೇಸ್ಗಳ ಮೇಲೆ ಹೆಚ್ಚು ಗಮನ ಹರಿಸಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅವರಿಗೂ ಚಿಕಿತ್ಸೆ ಪ್ರಾರಂಭಿಸಲು ಕಿಮ್ಸ್ ಮುಂದಾಗಿದೆ ಎಂದಿದ್ದಾರೆ.
ವಯೋಸಹಜ ಕಾಯಿಲೆಗಳ ಮೇಲೆ ಸೋಂಕು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಕೋವಿಡ್ ಜತೆಗೆ ಇತರ ರೋಗಿಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದೆ. ಕಿಮ್ಸ್ನಲ್ಲಿ ಎಲ್ಲಾ ರೋಗಿಗಳನ್ನು ಸಮನಾಗಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿರುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.