ಬೆಳ್ತಂಗಡಿ : ಸುಮಾರು 65 ವರ್ಷಗಳಿಂದ ಬೇಡಿಕೆಯನ್ನಿಟ್ಟಿದ್ದ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರ, ನಂದಿಕಾಡು, ಸಿಂಗನಾರು ಪ್ರದೇಶದ ಸುಮಾರು 30 ಮನೆಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಹರೀಶ್ ಪೂಂಜಾ ಶನಿವಾರ ಉದ್ಘಾಟಿಸಿದರು.
ಇಲ್ಲಿನ ಸ್ಥಳೀಯರು ಕಳೆದ ಆರು ದಶಕಗಳಿಂದ ರಸ್ತೆಗಾಗಿ ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದರು. ಕಳೆದ ಮಳೆಗಾಲದಲ್ಲೂ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಉಂಟಾಗಿತ್ತು. ಈ ಕುರಿತು ಸ್ಥಳೀಯರು ಶಾಸಕ ಹರೀಶ್ ಪೂಂಜಾರಿಗೆ ಮನವಿ ಸಲ್ಲಿಸಿ ರಸ್ತೆಗಾಗಿ ಬೇಡಿಕೆ ಇಟ್ಟಿದ್ದರು. ಇಲ್ಲಿನ ನಿವಾಸಿಗಳ ಮನವಿಗೆ ಸ್ಪಂದಿಸಿದ ಶಾಸಕರು ಆರು ತಿಂಗಳೊಳಗಾಗಿ ಕಾಂಕ್ರೀಟ್ ರಸ್ತೆಗೆ ಅನುದಾನ ಕಲ್ಪಿಸಿದರಲ್ಲದೇ ಶನಿವಾರ ಲೋಕಾರ್ಪಣೆ ಮಾಡಲಾಯಿತು. ಕಳೆದ ಮಳೆಗಾಲದಲ್ಲಿ ಬಂದ ನೆರೆ ಸಂದರ್ಭದಲ್ಲೂ ಶಾಸಕರು ನಮ್ಮೊಂದಿಗೆ ಇದ್ದು, ನಮ್ಮ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದು ಸ್ಥಳೀಯರು ಶಾಸಕರ ಅಭಿನಂದನೆ ಸಲ್ಲಿಸಿದರು.
ನೂತನ ಸೇತುವೆ ನಿರ್ಮಾಣಕ್ಕೆ ಮನವಿನಂದಿಕಾಡು ಕೊಟ್ರಡ್ಕ ಹೊಳೆಗೆ ಇಂದ್ಲಾಜೆ ಗುಂಡಿ ಎಂಬಲ್ಲಿ ಸುಮಾರು 20 ಮನೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಸ್ಥಳೀಯರಾದ ಸುಧಾಕರ ಮಲ್ಲ, ಡೀಕಯ್ಯ್ ಮಲೆಕುಡಿಯ, ಪದ್ಮ ಎಂ ಕೆ ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೊಟ್ಯಾನ್, ರೈತ ಮೋರ್ಚಾ ಅದ್ಯಕ್ಷ ಜಯಂತ ಗೌಡ, ಜಿಪಂ ಸದಸ್ಯೆ ಸೌಮ್ಯಲತಾ, ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಪೂಜಾರಿ, ಸದಸ್ಯ ಕೇಶವ ಎಮ್.ಕೆ., ಅಂಡಿಂಜೆ ಗ್ರಾ.ಪಂ ಅಧ್ಯಕ್ಷ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.