ಮಂಗಳೂರು: ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಮೆದುಳಿಗೂ ಮಾತಿಗೂ ಸಂಬಂಧ ಇಲ್ಲ. ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಮುಂದೆ ವಿಧಾನಸಭಾ ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮಾನಸಿಕ ಅಸ್ವಸ್ಥತೆಯಿಂದ ಮಾತನಾಡುತ್ತಿದ್ದಾರೆ ಎಂದು ವಿಪಕ್ಷ ಉಪನಾಯಕ ಯು ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ. ಆಜಾನ್ ಬಗ್ಗೆ ಈಶ್ವರಪ್ಪ ಹೇಳಿಕೆ ಸಂಬಂಧ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಖಾದರ್, ಈ ರೀತಿಯ ಮಾತಿನಿಂದ ಈಶ್ವರಪ್ಪ ಮೇಲಿನವರನ್ನು ಮೆಚ್ಚಿಸಲು ನೋಡುತ್ತಿದ್ದಾರೆ. ಅವರ ಮಾತಿಗೆ ಯಾವುದೇ ಬೆಲೆ ಇಲ್ಲ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಸಂವಿಧಾನ ಬದ್ಧ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರಲು ಜನರು ಶ್ರಮಿಸಬೇಕು ಎಂದು ಹೇಳಿದರು.
ಇನ್ನು, ಚುನಾವಣಾ ಸಂದರ್ಭ ಭಾವನಾತ್ಮಕ ಮಾತು ಬೇಡ. ಜನ ಸಾಮಾನ್ಯರ ಬದುಕಿಗೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಜನರಿಗೆ ತಿಳಿಸಿ. ಮುಗ್ಧ ಜನರನ್ನು ಭಾವನಾತ್ಮಕವಾಗಿ ಮಾಡಿ, ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವುದು ಬೇಡ.ಈಗಾಗಲೇ ಐದು ವರ್ಷ ರಾಜ್ಯದ ಜನರು ಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಮಾಡಿರುವ ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಬಿಜೆಪಿಗೆ ಕುಟುಕಿದರು.
ಪ್ರತಿಯೊಂದು ಧರ್ಮಕ್ಕೂ ಅದರದೇ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಮೌಲ್ಯ ಇದೆ. ಎಲ್ಲ ಧರ್ಮವನ್ನು ಅರ್ಥ ಮಾಡಿಕೊಂಡು, ಪರಸ್ಪರ ಸಂಸ್ಕೃತಿ ಅರ್ಥ ಮಾಡಿಕೊಂಡು ವಿಶ್ವಾಸ ಭರಿತ ಸಮಾಜ ನಿರ್ಮಾಣ ಮಾಡಬೇಕು. ಇನ್ನು ಯಾವುದೇ ವ್ಯಕ್ತಿ ಯಾವುದೇ ಧರ್ಮವನ್ನು ಅಪಹಾಸ್ಯ ಮಾಡಿದರೆ, ಆ ಧರ್ಮಕ್ಕೆ ಏನೂ ಆಗುವುದಿಲ್ಲ. ಒಂದು ವೇಳೆ ಧರ್ಮವನ್ನು ಅಪಹಾಸ್ಯ ಮಾಡಿದರೆ ಅದು ಅವರ ಸಂಸ್ಕೃತಿ ಮತ್ತು ನೀಚತನವನ್ನು ತೋರಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅಭಿಯಾನವನ್ನು ಟೀಕಿಸಿದ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಘೋಷಣೆ ಮಾಡಿದ ಯೋಜನೆಗಳಿಗೆ ಗ್ಯಾರಂಟಿಯೂ ವಾರಂಟಿಯೂ ಇದೆ. ಆದರೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಶೇ.5ರಷ್ಟು ಭರವಸೆಯನ್ನು ಈಡೇರಿಸಿಲ್ಲ. ನಾವು ಕೊಟ್ಟ ಮಾತುಗಳನ್ನು ಈಡೇರಿಸುವುದು ಗ್ಯಾರಂಟಿ ಎಂದು ಹೇಳಿದರು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯ ಸರ್ಕಾರದ ಅಂಗಡಿಯ ಶಟರ್ ಬಂದ್ ಮಾಡಿದೆ. ಜನತೆ ನೀರಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಬಿಜೆಪಿಯವರು ಸರ್ಕಾರದ ಕಚೇರಿ ಮುಚ್ಚಿಸಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಅಧಿಕಾರಿಗಳೂ ಎಲೆಕ್ಷನ್ ಡ್ಯೂಟಿ ಎಂದು ಹೋಗಿದ್ದಾರೆ. ಇದು ವಿಜಯ ಸಂಕಲ್ಪ ಯಾತ್ರೆಯಲ್ಲ. 40 ಪರ್ಸೆಂಟ್ ಯಾತ್ರೆ ಎಂದರು.
ನೀರಿಗೆ ಅನುದಾನವನ್ನು ಕ್ಷೇತ್ರವಾರು ಬಿಡುಗಡೆ ಮಾಡಬೇಕು. ನಮ್ಮ ಸರ್ಕಾರ ಇದ್ದಾಗ ಕ್ಷೇತ್ರಕ್ಕೆ 30 ಲಕ್ಷ ನೀಡಿದ್ದೆವು. ದಕ್ಷಿಣಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಎಲ್ಲದ್ದಾರೆಂದೂ ಗೊತ್ತಿಲ್ಲ. ರಾಜ್ಯ ಸರ್ಕಾರವು ಜನರಿಗೆ ಘೋರ ಅನ್ಯಾಯವನ್ನು ಮಾಡುತ್ತಿದೆ. ಆದ್ದರಿಂದ ತಕ್ಷಣ ಸಭೆ ನಡೆಸಿ ನೀರಿನ ಟಾಸ್ಕ್ ಫೋರ್ಸ್ಗೆ 50 ಲಕ್ಷ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ : ಮಂಗಳೂರಿನ ವಿಜಯಸಂಕಲ್ಪ ಯಾತ್ರೆಯಲ್ಲಿ ಆಝಾನ್ ವಿರುದ್ಧ ಅಸಮಾಧಾನಗೊಂಡ ಈಶ್ವರಪ್ಪ