ಬಂಟ್ವಾಳ : ತಾಲೂಕಿನ 4 ಗ್ರಾಪಂಗಳ 51 ಜನವಸತಿಗಳ 4,815 ಮನೆಗಳಿಗೆ ನೀರು ಸಂಪರ್ಕ ಒದಗಿಸುವ ಕುರಿತು ಕಾರ್ಯಯೋಜನೆ ರೂಪಿಸಲಾಗಿದ್ದು, ಇದಕ್ಕೆ ಸಚಿವ ಈಶ್ವರಪ್ಪ ಅನುಮೋದನೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಕುರಿತಾದ ಸಭೆ ನಡೆಯಿತು. ಈ ವೇಳೆ ಮಂಗಳೂರು ಹಾಗೂ ಮೂಡಬಿದಿರೆ ತಾಲೂಕಿನ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಚಿವರು ಅನುಮೋದನೆ ನೀಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮಗಳಾದ ಅಮ್ಮುಂಜೆ ಗ್ರಾಮದ 1,215 ಮನೆಗಳಿಗೆ, ಬಡಗಬೆಳ್ಳೂರು ಗ್ರಾಮದ 823 ಮನೆಗಳಿಗೆ, ತೆಂಕಬೆಳ್ಳೂರು ಗ್ರಾಮದ 315 ಮನೆಗಳಿಗೆ, ಕಳ್ಳಿಗೆ ಗ್ರಾಮದ 1,273 ಮನೆಗಳಿಗೆ, ಕರಿಯಂಗಳ ಗ್ರಾಮದ 890 ಮನೆಗಳಿಗೆ ಒಟ್ಟು 4 ಗ್ರಾಪಂನ 51 ಜನ ವಸತಿಗಳ 4,815 ಮನೆಗಳಿಗೆ ನಲ್ಲಿ ನೀರು ಸಂಪರ್ಕ ಒದಗಿಸುವ ಬಗ್ಗೆ ಕಾರ್ಯಯೋಜನೆ ರೂಪಿಸಿ, ಅನುಮೋದನೆ ನೀಡಿ ತಕ್ಷಣವೇ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮೂಡಬಿದಿರೆ ಶಾಸಕರಾದ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯ ಸರಕಾರದ ಪ್ರ.ಕಾರ್ಯದರ್ಶಿ ಎಲ್.ಕೆ. ಅತಿಕ್, ಗ್ರಾಮೀಣ ಕುಡಿಯುವ ನೀರಿನ ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಇಂಜಿನಿಯರ್ ಉಪಸ್ಥಿತರಿದ್ದರು.