ಬಂಟ್ವಾಳ (ದಕ್ಷಿಣ ಕನ್ನಡ): ಕೊರೊನಾ ಹರಡುವುದನ್ನು ತಡೆಗಟ್ಟಲು ಕರ್ನಾಟಕ ಕೇರಳ ಗಡಿಭಾಗವಾದ ಕಲ್ಲಡ್ಕ-ಕಾಂಞಗಾಡು ಹೆದ್ದಾರಿಯ ಸಾರಡ್ಕದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ರಸ್ತೆ ಬಂದ್ ಮಾಡಿದ ಪೊಲೀಸ್ ಸಿಬ್ಬಂದಿಗೆ ವ್ಯಕ್ತಿಯೊಬ್ಬ ಬೆದರಿಕೆ ಹಾಕಿ ಬಂಧಿತನಾಗಿದ್ದಾನೆ.
ಪೆರ್ಲ ಸಮೀಪದ ನಲ್ಕ ನಿವಾಸಿ ರಾಘವೇಂದ್ರ ರಾವ್ (50) ಬಂಧಿತ ಆರೋಪಿ. ಕೇರಳದ ಕಾಸರಗೋಡು ಭಾಗದಲ್ಲಿ ತೀವ್ರ ರೀತಿಯಲ್ಲಿ ಕೊರೊನಾ ಹರಡುತ್ತಿರುವ ಹಿನ್ನೆಲೆ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ದಕ್ಷಿಣಕನ್ನಡ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಪೊಲೀಸ್ ಇಲಾಖೆಯೂ ಚೆಕ್ ಪೋಸ್ಟ್ ಗಳನ್ನು ಬಂದ್ ಮಾಡಿ ವಾಹನಗಳನ್ನು ಹಿಂತಿರುಗಿಸಿ ಕಳುಹಿಸುವ ಪ್ರಯತ್ನ ಮಾಡಿತ್ತು.
ಬೆಳಗ್ಗಿನಿಂದಲೇ ಅಡ್ಯನಡ್ಕ ಕಡೆಯಿಂದ ಕೇರಳಕ್ಕೆ ಪ್ಯಾಕೇಟ್ ಹಾಲು ವಿತರಣೆ ಮಾಡುವ ನೆಪದಲ್ಲಿ ಸ್ಕೂಟರ್ ನಲ್ಲಿ ಹಲವು ಬಾರಿ ಸಂಚರಿಸಿದ ರಾಘವೇಂದ್ರ ಅವರಿಗೆ ಮಧ್ಯಾಹ್ನ 2ರ ಬಳಿಕ ವಾಹನ ಸಂಚಾರ ಇಲ್ಲ ಎಂಬ ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದರು.
ಅದನ್ನು ನಿರ್ಲಕ್ಷಿಸಿ ಸಂಚರಿಸಿ, ಗೇಟ್ ಬಂದ್ ಮಾಡಿದ ಬಳಿಕ ಅಡ್ಯನಡ್ಕಕ್ಕೆ ಬಿಡಬೇಕೆಂದು ತಗಾದೆ ತೆಗೆದಿದ್ದ ಎನ್ನಲಾಗಿದೆ. ಸಂಜೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ಎಸ್. ಕೆ. ಅವರ ಜತೆಗೆ ಮಾತಿಗೆ ನಿಂತು ಅಡ್ಯನಡ್ಕದಲ್ಲಿ ಅಂಗಡಿ ಇರುವುದರಿಂದ ವಾಹನ ಸಂಚಾರಕ್ಕೆ ಅನುವು ಮಾಡಬೇಕೆಂದು ಹೇಳಿದ್ದ. ಹಿರಿಯ ಅಧಿಕಾರಿಗಳ ಆದೇಶದ ಪ್ರಕಾರ ಕ್ರಮಕೈಗೊಂಡಿದ್ದೇವೆ ಎಂದರೂ, ರಾತ್ರಿ ಚೆಕ್ ಪೋಸ್ಟ್ ಸಿಬ್ಬಂದಿಗೆ ಬೆದರಿಕೆ ಹಾಕಿ ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾನೆ. ಗೇಟ್ ಓಪನ್ ಮಾಡಲು ಪ್ರಯತ್ನಿಸಿ, ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುವುದಾಗಿ ಸಿಬ್ಬಂದಿ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಯನ್ನು ಬಂಧಿಸಲಾಗಿದೆ.