ಮಂಗಳೂರು: ಕೋವಿಡ್-19 ಸೋಂಕು ಭೀತಿಯಿಂದ ರಾಜ್ಯ ಸರ್ಕಾರ ಘೋಷಿಸಿರುವ ಕರ್ಫ್ಯೂ ಮಾದರಿಯ ಭಾನುವಾರದ ಲಾಕ್ಡೌನ್ ನಗರದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಬೆಳಗ್ಗಿನಿಂದಲೇ ಜನ ಸಂಚಾರ, ವಾಹನ ಸಂಚಾರವಿಲ್ಲದೆ ಎಲ್ಲೆಡೆ ಸ್ತಬ್ಧ ವಾತಾವರಣ ಕಂಡು ಬರುತ್ತಿದೆ. ತರಕಾರಿ, ಹಾಲು, ಹಣ್ಣು, ಮೀನು ಮಾಂಸಗಳಂತಹ ಅಗತ್ಯ ಸಾಮಾಗ್ರಿಗಳು ದೊರೆಯಲಿವೆ ಎಂದು ಸರ್ಕಾರ ಘೋಷಣೆ ಮಾಡಿದ್ದರೂ ಹಾಲು ಹೊರತು ಬೇರೆ ಯಾವುದೇ ವಸ್ತು ದೊರೆಯುತ್ತಿಲ್ಲ. ತರಕಾರಿ, ಮೀನು, ಮಾಂಸದ ಮಾರುಕಟ್ಟೆಗಳು ಬಂದ್ ಆಗಿದೆ.
ರಸ್ತೆಯಲ್ಲಿಯೂ ಯಾವುದೇ ಖಾಸಗಿ, ಸಾರ್ವಜನಿಕ ವಾಹನಗಳ ಓಡಾಟಗಳೂ ಇಲ್ಲದೆ ಎಲ್ಲೆಡೆಯೂ ಬಿಕೋ ಎನ್ನುವ ವಾತಾವರಣ ಕಂಡು ಬರುತ್ತಿದೆ. ಪೂರ್ವ ನಿಗದಿಯಾಗಿರುವ ವಿವಾಹ ಸಮಾರಂಭಗಳ ವಾಹನಗಳಿಗೆ ಪರವಾನಿಗೆ ಮೇಲೆ ಅವಕಾಶ ನೀಡಲಾಗಿದೆ.
ನಾಲ್ಕನೇ ಹಂತದ ಲಾಕ್ಡೌನ್ನಲ್ಲಿ ಎಲ್ಲವನ್ನೂ ಸಡಿಲಿಕೆ ಮಾಡಿದ ಬಳಿಕ ಪ್ರತೀ ದಿನ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಜನಜೀವನ ಮೊದಲಿನಂತೆ ಆಗಿದೆ. ಆದರೆ ಭಾನುವಾರ ಸಂಪೂರ್ಣ ಲಾಕ್ಡೌನ್ ಅನುಷ್ಠಾನಗೊಳಿಸಿದ್ದು, ಅನಗತ್ಯ ಓಡಾಟ ನಡೆಸಿದವರ ಮೇಲೆ ಕ್ರಮ ಜರಗಿಸುವುದಾಗಿ ಸರ್ಕಾರ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಹದ್ದಿನ ಕಣ್ಣಿರಿಸಿದ್ದಾರೆ. ಎಲ್ಲಾ ವಾಹನಗಳನ್ನು ತಪಾಸಣೆ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.