ಮಂಗಳೂರು : ಹೊರ ರಾಜ್ಯದಿಂದ ಬಂದವರಿಗೆ ಸರ್ಕಾರಿ ಕ್ವಾರೆಂಟೈನ್ ಬದಲು ಹೋಮ್ ಕ್ವಾರಂಟೈನ್ ಎಂಬ ರಾಜ್ಯ ಸರ್ಕಾರದ ಆದೇಶದಿಂದ ಗ್ರಾಮಗಳಲ್ಲಿ ಸಮಸ್ಯೆಯಾಗುತ್ತಿದೆ. ಪರಸ್ಪರ ನೆರೆಮನೆಯಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಶಾಸಕ ಯು ಟಿ ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿರುವ ಕನ್ನಡಿಗರನ್ನು ಲಾಕ್ಡೌನ್ ಮಾಡಿ ಅಲ್ಲಿಯೇ ಕೂರಿಸಿ ರೋಗ ಇಲ್ಲದವರಿಗೂ ರೋಗ ಬರಿಸಿದ್ದೇ ಬಿಜೆಪಿ ಸರ್ಕಾರ. ಈಗ ಮಹಾರಾಷ್ಟ್ರದಿಂದ ಬಂದವರು ನೇರ ಮನೆಗೆ ಹೋದಲ್ಲಿ ನೆರೆಹೊರೆಯವರು ತಕರಾರು ತೆಗೆಯೋದಿಲ್ಲವಾ ಎಂದು ಪ್ರಶ್ನಿಸಿದರು.
ಬಿಜೆಪಿಯ ಸಂಸದೆ ಶೋಭಾ ಕರಂದ್ಲಾಜೆಯವರು ಮಹಾರಾಷ್ಟ್ರದವರು ರಾಜ್ಯಕ್ಕೆ ಬರೋದು ಬೇಡ ಎಂದು ಹೇಳುತ್ತಾರೆ. ಆದರೆ, ರಾಜ್ಯ ಸರ್ಕಾರ ಕ್ವಾರಂಟೈನ್, ಟೆಸ್ಟ್ ಇಲ್ಲದೆ ಮನೆಗೆ ಕಳುಹಿಸುತ್ತದೆ. ಆದ್ದರಿಂದ ನನ್ನ ಕ್ಷೇತ್ರಕ್ಕೆ ಹೊರರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಬೆಳ್ಮ ಗ್ರಾಪಂ ನೋಡಲ್ ಕಚೇರಿಯಾಗಿ ಮಾಡಲಾಗಿದೆ. ಪಿಡಿಒ ನೋಡಲ್ ಅಧಿಕಾರಿಯಾಗಿ ಮಾಡಲಾಗಿದೆ. ಯಾರೇ ಬಂದರೂ ಏಳು ದಿನಗಳ ಕ್ವಾರಂಟೈನ್ ಮಾಡಿಯೇ ಮನೆಗೆ ಕಳುಹಿಸಲಾಗುತ್ತಿದೆ. ಆದ್ದರಿಂದ ನೆರೆಹೊರೆಯವರ ಮಧ್ಯೆ ವೈಮನಸ್ಸು, ಗೊಂದಲ ಸೃಷ್ಟಿಯಾಗದಂತೆ ನೋಡುದ್ದೇವೆ ಎಂದರು.
ಟ್ರೈನ್ನಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಹೇಳಿದ ಟ್ರೈನ್ಗಳು ಎಲ್ಲಿ ಹೋಯಿತು?. 10 ಸಾವಿರ ಮಂದಿಗೆ ಕ್ವಾರಂಟೈನ್ ಮಾಡಲು ಟ್ರೈನ್ಗಳ ಮೂಲಕ ಮಂಗಳೂರು ಸಜ್ಜಾಗಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಯಾವ ಕ್ವಾರಂಟೈನ್ ಕೂಡಾ ಇಲ್ಲ. ಉಡುಪಿಯಲ್ಲಿ ಪ್ರತಿದಿನ ಎಷ್ಟು ಜನರನ್ನು ಟೆಸ್ಟ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ದ.ಕ ಜಿಲ್ಲೆಯಲ್ಲಿ ದಿನವೂ ಎಷ್ಟು ಟೆಸ್ಟ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳಲಿ. ಪಾಸಿಟಿವ್ ಬಂದಲ್ಲಿ ಸಮಸ್ಯೆ ಇಲ್ಲ. ಯಾಕೆಂದರೆ, ಎಲ್ಲಾ ರೋಗಗಳಂತೆ ಇದೂ ರೋಗ, ಗುಣಮುಖವಾಗುತ್ತದೆ. ಆದರೆ, ಇಲ್ಲಿ ಟೆಸ್ಟೇ ಮಾಡೋದಿಲ್ಲ ಅಂದ್ರೆ ಕಷ್ಟ. ಹಾಗಾದಲ್ಲಿ ರ್ಯಾಪಿಡ್ ಟೆಸ್ಟ್ ಕಿಟ್ ಎಲ್ಲಿ ಹೋಯ್ತು?. ಖಾಸಗಿ ಆಸ್ಪತ್ರೆಗಳಲ್ಲಿ ರ್ಯಾಪಿಡ್ ಕಿಟ್ ಬಳಸಿ ಟೆಸ್ಟ್ ಮಾಡಲಾಗುತ್ತದೆ. ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಖಾದರ್ ಪ್ರಶ್ನಿಸಿದ್ದಾರೆ.