ಮಂಗಳೂರು(ದಕ್ಷಿಣ ಕನ್ನಡ): ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಸ್ವಚ್ಛ ವಾಹಿನಿ ವಾಹನಗಳಿಗೆ ಜಿಪಿಎಸ್ ಅಳವಡಿಸಿ, ಅವರ ಚಲನವಲನಗಳ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ. ಪ್ರಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 23 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ವಾಹಿನಿ ವಾಹನಗಳಿಗೆ ಜಿಪಿಎಸ್ ಅಳವಡಿಸಿದ ಬಳಿಕ ಪ್ರತಿಕ್ರಿಯೆ ನೋಡಿ ಜಿಲ್ಲೆಯ ಇತರೆ ಸ್ವಚ್ಛ ವಾಹಿನಿ ವಾಹನಗಳಿಗೂ ವಿಸ್ತರಿಸಲು ನಿರ್ಧಾರ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳ ಪೈಕಿ 169 ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛ ವಾಹಿನಿ ವಾಹನಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. ಇದರಲ್ಲಿ ಈಗಾಗಲೇ ಎಂಟು ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಇತರ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಸಿಇಒ ಡಾ.ಕುಮಾರ್ ತಿಳಿಸಿದ್ದಾರೆ.
ಸ್ವಚ್ಛ ವಾಹಿನಿ ವಾಹನಗಳಿಗೆ ಜಿಪಿಎಸ್ ಅಳವಡಿಸಿದರೆ ಅದರ ಚಲನವಲನಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಜಿಪಿಎಸ್ ವಾಹನಗಳ ಚಲನೆಯನ್ನು ಮತ್ತು ಒಂದು ದಿನದಲ್ಲಿ ಅವು ಸಂಚರಿಸುವ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಇದು ನಿರ್ದಿಷ್ಟ ದಿನದಂದು ತ್ಯಾಜ್ಯ ಸಂಗ್ರಹಣೆಯು ಪ್ರಾರಂಭವಾದ ಸಮಯವನ್ನು ಪರಿಶೀಲಿಸುತ್ತದೆ. ಸಂಗ್ರಹವಾದ ಕಸದ ಪ್ರಮಾಣವನ್ನು ತಿಳಿಯಲು ಕೂಡ ಇದು ಸಹಾಯ ಮಾಡಲಿದೆ ಎಂದಿದ್ದಾರೆ.