ಬಂಟ್ವಾಳ : ಗ್ರಾಮೀಣ ಪ್ರದೇಶದ ಆಸ್ತಿಗಳನ್ನು ಡ್ರೋಣ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸುವ ಸರ್ಕಾರದ ನೂತನ ಕಾರ್ಯಕ್ರಮ ಸ್ವಾಮಿತ್ವಕ್ಕೆ ತಾಲೂಕಿನ ಪೆರಾಜೆ ಗ್ರಾಪಂನಲ್ಲಿ ವಿಶೇಷ ಗ್ರಾಮಸಭೆ ನಡೆಸುವ ಮೂಲಕ ಚಾಲನೆ ನೀಡಲಾಯಿತು.
ಗ್ರಾಮಾಂತರ ಭಾಗಗಳಲ್ಲಿ ತಲೆತಲಾಂತರಗಳಿಂದ ದಾಖಲೆ ಹೊಂದದ ಗ್ರಾಮಸ್ಥರಿಗೆ ತಮ್ಮ ಆಸ್ತಿಗಳ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಸರ್ಕಾರ ಈ ಮೂಲಕ ಅವಕಾಶ ನೀಡಿದೆ. ಇದಕ್ಕಾಗಿ ಡ್ರೋಣ್ ತಂತ್ರಜ್ಞಾನ ಅಳವಡಿಸಲಾಗಿದೆ.
ಹಲವು ದಶಕಗಳ ಹಿಂದೆ ಆಸ್ತಿಗಳ ದಾಖಲೆಗಳನ್ನು ಮಾಡಲಾಗಿದೆ. ಅದಾದ ಬಳಿಕ ಸರಿಯಾದ ಗಡಿ ಗುರುತು ಕಾರ್ಯ ನಡೆಯದೆ ಸಮಸ್ಯೆ ಎದುರಾಗಿತ್ತು. ಹೀಗಾಗಿ, ಸರ್ವೆ ಇಲಾಖೆಯು ಗ್ರಾಪಂಗಳ ಸಹಾಯದಿಂದ ಡ್ರೋಣ್ ತಂತ್ರಜ್ಞಾನದ ಮೂಲಕ ಗಡಿ ಗುರುತು ಕಾರ್ಯ ನಡೆಸಲಿದೆ.
ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಪುಷ್ಪರಾಜ್ ಪೂಜಾರಿ ಅವರು, ಗ್ರಾಮೀಣ ಪ್ರದೇಶಗಳ ಆಸ್ತಿಗಳನ್ನು ಡ್ರೋಣ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸುವ ಸ್ವಾಮಿತ್ವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಪಂ ಆಡಳಿತಾಧಿಕಾರಿ ನಂದನ್ ಶೆಣೈ , ತಾಪಂ ಸದಸ್ಯೆ ಮಂಜುಳಾ ಕುಶಲ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ್ ಉಪಸ್ಥಿತರಿದ್ದರು.