ಪುತ್ತೂರು: ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ತಾಯಿ ಇಂದು ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಹಿಂದೂ ಸಂಘಟನೆ ಮುಖಂಡರು ತಾಲೂಕು ಆಡಳಿತ ಸಿಬ್ಬಂದಿ ಜೊತೆ ಕೈಜೋಡಿಸಿ ನೆರವೇರಿಸಿದರು.
ಮೃತ ಮಹಿಳೆ ಕೊರೊನಾ ಸೋಂಕಿತನ ಪ್ರಾಥಮಿಕ ಸಂಪರ್ಕಿತೆಯೂ ಆದ ಕಾರಣ ಕೋವಿಡ್ ಶಿಷ್ಟಾಚಾರದಂತೆ ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಅವರು ಮೃತಪಟ್ಟಿದ್ದಾರೆ. ತಾಲೂಕು ಆಡಳಿತದ ಸಿಬ್ಬಂದಿಯೊಂದಿಗೆ ಹಿಂದೂ ಸಂಘಟನೆಯ ಪ್ರಮುಖರು ಸೇರಿ ಮೃತ ಮಹಿಳೆಯ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಕೋವಿಡ್ ನಿಯಮಾವಳಿಯಂತೆ ಪಿಪಿಇ ಕಿಟ್ ಧರಿಸಿದ್ದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ಪುತ್ತೂರು ನಗರ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಜಗನ್ನಿವಾಸ ರಾವ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಪುತ್ತೂರು ವೈದ್ಯಾಧಿಕಾರಿ ಅಶೋಕ್ ರೈ, ಪಿಎಸ್ಐ ತಿಮ್ಮಪ್ಪ ನಾಯ್ಕ್, ತಹಶೀಲ್ದಾರ್ ರಮೇಶ್ ಬಾಬು ಈ ಸಮಯದಲ್ಲಿ ಹಾಜರಿದ್ದರು.