ನವದೆಹಲಿ: ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯು 'ಕ್ರೂರ'ವಾಗಿದೆ ಎಂದು ಸುಪ್ರೀಂ ಕೋರ್ಟ್ ಇಂದು (ಬುಧವಾರ) ಅಭಿಪ್ರಾಯಪಟ್ಟಿತು.
ಈ ಕಾಯ್ದೆಯಡಿ ತನ್ನ ವಿರುದ್ಧ ಪ್ರಕರಣ ದಾಖಲಾದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಾಯ್ದೆಯಡಿ ಕಾಸ್ ಗಂಜ್ನ ಜಿಲ್ಲಾ ನ್ಯಾಯಾಲಯದಲ್ಲಿ ತನ್ನ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಈ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಮೇ 2023ರಲ್ಲಿ ತಿರಸ್ಕರಿಸಿತ್ತು. ಹೈಕೋರ್ಟ್ನ ಈ ಆದೇಶ ಪ್ರಶ್ನಿಸಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
"ಈ ಕಾಯ್ದೆ ಕ್ರೂರವಾಗಿದೆ ಎಂದು ನಮಗೆ ಅನಿಸುತ್ತಿರುವುದರಿಂದ ನಾವು ಈ ಬಗ್ಗೆ ವಿಚಾರಣೆ ನಡೆಸುತ್ತೇವೆ" ಎಂದು ಹೇಳಿದ ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ಅಂಗೀಕರಿಸಿದೆ.
ಯುಪಿ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ್ದ ಸುಪ್ರೀಂ ಕೋರ್ಟ್: ಕಳೆದ ವರ್ಷ ನವೆಂಬರ್ನಲ್ಲಿ ಈ ಪ್ರಕರಣದ ವಿಚಾರಣೆಯ ವೇಳೆ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೆ ಅರ್ಜಿದಾರರ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಮಧ್ಯಂತರ ಆದೇಶ ನೀಡಿತ್ತು.
ಅರ್ಜಿದಾರರ ಪರ ವಕೀಲರ ವಾದವೇನು?: ಗಂಗಾ ನದಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ 1986ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ತಮ್ಮ ಕಕ್ಷಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿದಾರರ ವಕೀಲರು ಬುಧವಾರ ತಿಳಿಸಿದ್ದಾರೆ.
ಈ ಹಿಂದೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ವಕೀಲರು ವಾದಿಸಿದರು. ಇದೇ ಆರೋಪಕ್ಕಾಗಿ ತಮ್ಮ ಕಕ್ಷಿದಾರರ ವಿರುದ್ಧ ಎರಡು ಬಾರಿ ಪ್ರಕರಣ ದಾಖಲಿಸಲಾಗಿದೆ ಎಂದು ವಕೀಲರು ಹೇಳಿದರು. ಗ್ಯಾಂಗ್‌ಸ್ಟರ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ತನ್ನ ಕಕ್ಷಿದಾರರನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಅವರು ವಾದಿಸಿದರು. ರಾಜ್ಯದ ಪರವಾಗಿ ಹಾಜರಾದ ವಕೀಲರು 1986ರ ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿದರು.
ನವೆಂಬರ್ 29ರಂದು, ಕಾಯ್ದೆಯ ಕೆಲವು ನಿಬಂಧನೆಗಳ ಸಿಂಧುತ್ವವನ್ನು ಪ್ರಶ್ನಿಸಿ ಪ್ರತ್ಯೇಕ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು ಮತ್ತು ಅರ್ಜಿಯ ಬಗ್ಗೆ ಪ್ರತಿಕ್ರಿಯೆ ಕೋರಿ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿತ್ತು.