ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಸಿನಿಮಾಗಳು ಶೂಟಿಂಗ್ ಮುಗಿಸಿ ಬಿಡುಗಡೆ ಆಗದೇ ಉಳಿದಿರುವ ಸಾಕಷ್ಟು ಉದಾಹರಣೆಗಳಿವೆ. ಇದೀಗ, 16 ವರ್ಷಗಳ ಹಿಂದೆಯೇ ಚಿತ್ರೀಕರಣ ನಡೆದಿದ್ದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಮೋಹಕ ತಾರೆ ರಮ್ಯಾ ಅಭಿನಯದ "ರಕ್ತ ಕಾಶ್ಮೀರ" ಬಿಡುಗಡೆಗೆ ಸಜ್ಜಾಗಿದೆ.
ಖ್ಯಾತ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಆ್ಯಕ್ಷನ್ ಕಟ್ ಹೇಳಿದ್ದ "ರಕ್ತ ಕಾಶ್ಮೀರ" ಶೀರ್ಷಿಕೆಯ ಸಿನಿಮಾ ಶೂಟಿಂಗ್ ಮುಗಿಸಿ ಬಿಡುಗಡೆ ಆಗಬೇಕು ಎಂಬ ಹೊತ್ತಲ್ಲಿ ನಿರ್ಮಾಪಕರ ಹಣಕಾಸಿನ ವಿಚಾರದಿಂದಾಗಿ ಬರೋಬ್ಬರಿ 16 ವರ್ಷ ತೆರೆಕಾಣದೇ ಉಳಿಯುವ ಹಾಗೇ ಆಗಿತ್ತು. ಸದ್ಯ ಸಿನಿಮಾಗೆ ಮುಹೂರ್ತ ಭಾಗ್ಯ ಸಿಕ್ಕಿದೆ. ಈ ಚಿತ್ರ ಹೊಸ ವರ್ಷಕ್ಕೆ ಬಿಡುಗಡೆ ಆಗಲು ಸಜ್ಜಾಗಿದೆ.
ಸದ್ಯ ಬುದ್ಧಿವಂತ ಖ್ಯಾತಿಯ ಉಪೇಂದ್ರ ಅವರು ನಟಿಸಿ ನಿರ್ದೇಶಿಸಿರೋ ಬಹು ನಿರೀಕ್ಷೆಯ 'ಯು ಐ' ಸಿನಿಮಾ ಇದೇ ಡಿಸೆಂಬರ್ 20ಕ್ಕೆ ಬಿಡುಗಡೆ ಆಗುತ್ತಿದೆ. ಇಂಥ ಸಮಯದಲ್ಲಿ ಉಪೇಂದ್ರ ನಟಿಸಿರೋ ಹಳೇ ಸಿನಿಮಾವೊಂದು ಬಿಡುಗಡೆ ಕಾಣಲು ಸಜ್ಜಾಗಿದೆ. 2008ರಲ್ಲಿ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದರು. ಉಪೇಂದ್ರ ಹಾಗೂ ಮೋಹಕತಾರೆ ರಮ್ಯಾ ಅಭಿನಯದ ಚಿತ್ರಕ್ಕೆ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಎಂಬ ಶೀರ್ಷಿಕೆ ಇಡಲಾಗಿತ್ತು. ಈ ಚಿತ್ರ ಬಹುತೇಕ ಶೂಟಿಂಗ್ ಮುಗಿಸಿ ಬಿಡುಗಡೆ ಕಾಣುವ ಹೊತ್ತಲ್ಲಿ ನಿರ್ಮಾಪಕರ ನಡುವೆ ಹಣಕಾಸಿನ ವಿಚಾರದಿಂದಾಗಿ ನಿಂತು ಹೋಗಿತ್ತು. ಇದೀಗ ಹಳೇ ಟೈಟಲ್ ಕೈ ಬಿಟ್ಟು, 'ರಕ್ತ ಕಾಶ್ಮೀರ' ಎಂಬ ಹೊಸ ಶೀರ್ಷಿಕೆಯೊಂದಿಗೆ ಪ್ರೇಕ್ಷಕರೆದುರು ಬರಲು ರೆಡಿಯಾಗಿದೆ.
ಈ ಬಗ್ಗೆ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಆ ಸಮಯದಲ್ಲಿ ಸ್ವಲ್ಪ ಹಣಕಾಸಿನ ವಿಚಾರವಾಗಿ ನಿರ್ಮಾಪಕರ ನಡುವೆ ಮನಸ್ತಾಪ ಉಂಟಾಗಿ ಈ ಸಿನಿಮಾ ಬಿಡುಗಡೆ ಮಾಡಲು ಆಗಿರಲಿಲ್ಲ. ಸದ್ಯ ಸಮಸ್ಯೆ ಬಗೆಹರಿದಿದೆ. ಎಮ್ಡಿಎಮ್ ಪ್ರೊಡಕ್ಷನ್ ಲಾಂಛನದಲ್ಲಿ ಸಿನಿಮಾ ನಿರ್ಮಾಣಗೊಂಡು ಬಿಡುಗಡೆ ಆಗಲು ಸಜ್ಜಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್ನಲ್ಲೇ 100 ಕೋಟಿ ದಾಟಿದ 'ಪುಷ್ಪ 2': ಮೊದಲ ದಿನವೇ 275 ಕೋಟಿ ಗಳಿಸುವ ಸಾಧ್ಯತೆ
ಇನ್ನು, ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇದೇ ಚಿತ್ರದ ಪ್ರಮುಖ ಕಥಾಹಂದರವಾಗಿದೆ. ಗಡಿ ಪ್ರದೇಶ ಅಷ್ಟೇ ಅಲ್ಲ, ಬೆಂಗಳೂರಿನಲ್ಲೂ ಉಗ್ರಗಾಮಿಗಳ ಕಾಟವಿದೆ. ಅದರ ನಿರ್ಮೂಲನೆಗೆ ಸಂಬಂಧಿಸಿದ ಕಥಾವಸ್ತುವನ್ನು ಈ ಚಿತ್ರ ಒಳಗೊಂಡಿದೆ ಎಂದಿದ್ದಾರೆ.
ಇದನ್ನೂ ಓದಿ: ಉಗ್ರಂ ಮಂಜು ಐಶ್ವರ್ಯಾ ಬಿಗ್ ವಾರ್: ಮಂಜುರಿಂದ ಸ್ಪರ್ಧಿಗಳನ್ನು ಕುಗ್ಗಿಸೋ ಕೆಲಸವಾಗ್ತಿದೆಯಾ?
ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಮ್ಯಾ ಮುಖ್ಯಭೂಮಿಕೆಯಲ್ಲಿದ್ದಾರೆ. ಇವರ ಜೊತೆ ದೊಡ್ಡಣ್ಣ, ಓಂಪ್ರಕಾಶ್ ರಾವ್, ಅನಿಲ (ತೆಲುಗು ನಟ), ಕುರಿ ಪ್ರತಾಪ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಎಸ್.ವಿ ರಾಜೇಂದ್ರಸಿಂಗ್ ಬಾಬು ಅವರೇ "ರಕ್ತ ಕಾಶ್ಮೀರ" ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆ ಎಂ.ಎಸ್ ರಮೇಶ್ ಅವರದ್ದು. ಗುರುಕಿರಣ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. 16 ವರ್ಷಗಳ ಹಿಂದೆ ಶೂಟಿಂಗ್ ಮಾಡಿರೋ ಈ ಚಿತ್ರ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಒಳಗೊಂಡಿದೆಯಂತೆ. ಹೊಸ ವರ್ಷಕ್ಕೆ ಈ ರಕ್ತ ಕಾಶ್ಮೀರ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.