ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂಥ ಗ್ರಾಮದ ಆಳಕೆಗುತ್ತು ಎಂಬಲ್ಲಿ ವಾಸಿಸುತ್ತಿರುವ ಅಶಕ್ತ ವಿಧವಾ ಸಹೋದರಿಯರಾದ ಶಾಂಭವಿ ಶೆಟ್ಟಿ, ಜಯಂತಿ ಶೆಟ್ಟಿಯವರಿಗೆ ವಾಸಯೋಗ್ಯ ಮನೆ ಇಲ್ಲದಿರುವುದನ್ನು ಮನಗಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ತಿಂಗಳಿಗೆ 1 ಸಾವಿರ ರೂ. ಮಾಸಾಶನ ಹಾಗೂ ಮನೆ ನಿರ್ಮಾಣದ ಸಹಾಯಾರ್ಥವಾಗಿ ಹಣ ಹಸ್ತಾಂತರಿಸಲಾಯಿತು.
ಮಾಸಾಶನ ಮಂಜೂರಾತಿ ಪತ್ರ ಹಾಗೂ ಸಹಾಯ ಧನ ವಿತರಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ವಿಪತ್ತು ನಿರ್ವಹಣಾ ಮತ್ತು ಜನ ಜಾಗೃತಿ) ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಇಂದು ಕರ್ನಾಟಕ ರಾಜ್ಯದ 30 ಜಿಲ್ಲೆಗಳಲ್ಲಿ ಕಾರ್ಯನಿತರವಾಗಿದೆ.
ವಾತ್ಸಲ್ಯ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ತಣ್ಣೀರುಪಂಥ ವಲಯದ ಅಳಕೆ ಗುತ್ತುವಿನ ಶಾಂಭವಿ ಶೆಟ್ಟಿ ಅವರ ಕುಟುಂಬಕ್ಕೆ ನಿರ್ಗತಿಕರ ಮಾಸಾಶನ ತಿಂಗಳಿಗೆ 1 ಸಾವಿರ ರೂ. ನೀಡಲಾಗುವುದು. ಅವರ ಪರಿಸ್ಥಿತಿಗೆ ಸ್ಪಂದಿಸಿ ಕ್ಷೇತ್ರದ ವತಿಯಿಂದ ಮನೆ ನಿರ್ಮಾಣಕ್ಕೆ ಡಾ. ಹೆಗ್ಗಡೆ ಅವರ ಅನುದಾನದಿಂದ 25 ಸಾವಿರ ರೂ. ಧನಸಹಾಯ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಯಶವಂತ್ ಎಸ್, ಪ್ರಗತಿಬಂಧು ಒಕ್ಕೂಟ ಕೇಂದ್ರ ಸಮಿತಿ ಅಧ್ಯಕ್ಷ ಪ್ರಭಾಕರ್ ಪೊಸಂದೋಡಿ, ವಲಯ ಮೇಲ್ವಿಚಾರಕಿ ವಿದ್ಯಾ, ಚೈತ್ರೇಶ್ ಇಳಂತಿಲ, ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.