ಮಂಗಳೂರು: ನಗರದ ಹೊರವಲಯದ ದ್ವಿಚಕ್ರ ವಾಹನದಲ್ಲಿ ಬಜ್ಜೆಗೆ ತೆರಳುತ್ತಿದ್ದ ಇಬ್ಬರು ಯುವಕರ ಮೇಲೆ ತಂಡವೊಂದು ದಾಳಿ ಮಾಡಿ, ಡ್ರ್ಯಾಗರ್ನಿಂದ ಇರಿದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಕರಂಬಾರು ಶಾಂತಿಗುಡ್ಡೆ ನಿವಾಸಿ ಅಬ್ದುಲ್ ಸಫ್ವಾನ್ (23) ಕೈ ಮತ್ತು ಕುತ್ತಿಗೆಗೆ ಚುಚ್ಚಿದ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೂರಿ ಇರಿತ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಬಜ್ಪೆ ಕಳವಾರು ನಿವಾಸಿ ಪ್ರಶಾಂತ್ ಯಾನೆ ಪಚ್ಚು (28), ಧನರಾಜ್ (23), ಯಜ್ಞೆಶ್ (22) ಎಂಬವರನ್ನು ಬಂಧಿಸಲಾಗಿದೆ. ಅಬ್ದುಲ್ ಸಫ್ವಾನ್ ಮತ್ತು ಸ್ನೇಹಿತ ಮುಹಮ್ಮದ್ ಸಫ್ವಾನ್ ಎಂಬವರು ಕರಂಬಾರಿನಿಂದ ಬಜ್ಪೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬಸ್ತಿ ಬಳಿ ಅಡ್ಡಗಟ್ಟಿದ 20-30 ಮಂದಿಯ ತಂಡ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಡ್ರಾಗರ್‌ನಿಂದ ಹಲ್ಲೆ ನಡೆಸಿದ್ದಾರೆ.
ಘಟನೆಯ ಕುರಿತು ಮಾಹಿತಿ ಸಿಕ್ಕ ತಕ್ಷಣ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಅಬ್ದುಲ್ ಸಫ್ವಾನ್ ಅವರಿಂದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲದಿನಗಳ ಹಿಂದೆ ಬಜ್ಪೆಯ ಕಳವಾರು ಭಾಗದಲ್ಲಿ ಮದ್ಯ ವ್ಯಸನಿಯೋರ್ವ ಹಲ್ಲೆ ನಡೆಸಿದ್ದ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ಆತನಿಗೆ ನ್ಯಾಯಾಂಗ ಬಂಧನವಾಗಿದೆ. ಇದೇ ಹಿನ್ನೆಲೆಯಲ್ಲಿ ಚೂರಿ ಇರಿತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕೆಎಸ್‌ಆರ್‌ಪಿಯ ಒಂದು ತುಕಡಿ, ಎರಡು ಹೊಯ್ಸಳ ವಾಹನಗಳು ಹಾಗೂ ಘಟನಾ ಸ್ಥಳದ ಸಮೀಪದಲ್ಲಿ ಮತ್ತು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಪ್ರತ್ಯೇಕ ಪ್ರಕರಣ- ಕುಕ್ಕೆ ದೇವರ ದರ್ಶನ ಮಾಡಿ ಬಸ್ ಹತ್ತಿದಾಗ 25 ಗ್ರಾಂ ಮಾಂಗಲ್ಯ ಸರ ಕಳವು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಬಳಿಕ ಊರಿಗೆ ತೆರಳಲು ಬಸ್ ಹತ್ತಿದ ವೇಳೆ ಕೊಡಗು ಮೂಲದ ಮಹಿಳೆಯ ಮಾಂಗಲ್ಯ ಸರ ಕಳ್ಳತನವಾದ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರ ಸಂತೆ ನಿವಾಸಿಯಾದ ಲೀಲಾ (55) ಎಂಬುವರು ಮಾಂಗಲ್ಯ ಸರ ಕಳೆದುಕೊಂಡವರು.
ಭಾನುವಾರ ಬೆಳಗ್ಗೆ ಲೀಲಾ ಅವರು ಊರಿನ ಇತರರೊಂದಿಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ಊರಿಗೆ ಹೋಗಲು ಬಸ್ ಹತ್ತಿದಾಗ ಈ ಕಳವು ನಡೆದಿದೆ. ಮಧ್ಯಾಹ್ನ ನೂಕುನುಗ್ಗಲಿನಲ್ಲಿ ಹಾಸನ ಬೆಂಗಳೂರು ಬಸ್ಗೆ ಮಹಿಳೆ ಹತ್ತಿದ್ದರು. ಬಳಿಕ ಬಸ್ ಹತ್ತಿ ಸೀಟಿನಲ್ಲಿ ಕೂತು ನೋಡಿದಾಗ ಅವರ ಕುತ್ತಿಗೆಯಲ್ಲಿದ್ದ ಸುಮಾರು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿದೆ. 'ಬಸ್ನಲ್ಲಿ ಹತ್ತುವಾಗ 87,000 ರೂ. ಮೌಲ್ಯದ ಮಾಂಗಲ್ಯ ಸರ ಕಳ್ಳತನವಾಗಿದೆ ಎಂದು ಮಹಿಳೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಸಂಚರಿಸುತ್ತಿದ್ದ ಬಸ್ನಿಂದ ಹೊರಗೆ ಬಿದ್ದು ಕಂಡಕ್ಟರ್ ಸಾವು- ಘಟನೆಯ ವಿಡಿಯೋ ವೈರಲ್