ಬಂಟ್ವಾಳ (ದಕ್ಷಿಣ ಕನ್ನಡ): ಬಂಟ್ವಾಳ ತಾಲೂಕಿನ ಕೇಂದ್ರ ಬಿ.ಸಿ. ರೋಡು, ಬಂಟ್ವಾಳ ಪೇಟೆ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಬೆಳಗ್ಗೆ 11 ಗಂಟೆಯವರೆಗೆ ದಿನಸಿ, ತರಕಾರಿ, ಬೇಕರಿ ಮಳಿಗೆಗಳು ತೆರೆದಿದ್ದವು. ಜತೆಗೆ ಬ್ಯಾಂಕ್ಗಳು, ಸಹಕಾರಿ ಸಂಸ್ಥೆಗಳು, ಮೆಡಿಕಲ್ ಅಂಗಡಿಗಳು ಸಹ ತೆರೆದಿದ್ದವು.
ಬಿ.ಸಿ. ರೋಡಿನಲ್ಲಿ 11 ಗಂಟೆಯವರೆಗೆ ಜನಸಂಚಾರ ಕಂಡುಬಂದಿದ್ದು, ವಾಹನಗಳು ಕೂಡ ಇದ್ದವು. ಬಳಿಕ ವಾಹನ ಸಂಚಾರ ಕಡಿಮೆಯಾಗಿತ್ತು. ತಾಲೂಕಿನಾದ್ಯಂತ ಖಾಸಗಿ, ಸರಕಾರಿ ಬಸ್ಸು ಸಂಚಾರವಿರಲಿಲ್ಲ. ಬೆರಳೆಣಿಕೆ ಆಟೋಗಳಷ್ಟೆ ಸಂಚಾರ ನಡೆಸಿದ್ದವು.
ಗ್ರಾಮೀಣ ಭಾಗಗಳಲ್ಲಿ ನಿತ್ಯದ ವಾತಾವರಣ ಕಂಡುಬಂದಿತ್ತು. ಉಳಿದಂತೆ ನಗರ ಪ್ರದೇಶಗಳಲ್ಲಿ ಹೋಟೆಲ್ಗಳು ಸೇರಿದಂತೆ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಉತ್ತಮ ಮಳೆಯಿದ್ದು, ಈ ಕಾರಣದಿಂದಲೇ ಜನತೆ ಮನೆಯಿಂದ ಹೊರಬರಲಿಲ್ಲ. ಪೊಲೀಸರು ಗಸ್ತು ತಿರುಗುತ್ತಿದ್ದು, ಜನತೆ ಅನಗತ್ಯ ಓಡಾಟ ನಡೆಸದಂತೆ ಎಚ್ಚರಿಕೆ ವಹಿಸಿದ್ದರು. ಉಳಿದಂತೆ ತಾಲೂಕಿನಾದ್ಯಂತ ಮೊದಲ ದಿನದ ಲಾಕ್ಡೌನ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.