Maha Kumbh Mela Google Animation: ಭಕ್ತರ ನಂಬಿಕೆಯ ಮಹಾಹಬ್ಬ 'ಮಹಾ ಕುಂಭಮೇಳ-2025' ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರದಿಂದ ಶುರುವಾದ ವಿಶ್ವದ ಈ ಅತಿದೊಡ್ಡ ಮೇಳ ಫೆಬ್ರವರಿ 26 ರವರೆಗೆ ನಡೆಯಲಿದೆ. ಕೋಟ್ಯಂತರ ಭಕ್ತರು ಮಹಾ ಕುಂಭ ನಗರ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗತಿಕ ಸರ್ಚ್ ಎಂಜಿನ್ ದೈತ್ಯ ಗೂಗಲ್ ವಿಶೇಷ ರೀತಿಯಲ್ಲಿ ಗೌರವ ಸೂಚಿಸಿದೆ.
ನೀವು ಗೂಗಲ್ನಲ್ಲಿ ‘Maha Kumbh’ ಎಂದು ಯಾವುದೇ ಭಾಷೆಯಲ್ಲಿ ಸರ್ಚ್ ಮಾಡಿದರೆ ಸ್ಕ್ರೀನ್ ಮೇಲೆ ಗುಲಾಬಿ ದಳಗಳು ಬೀಳುತ್ತಿರುವ ಅನಿಮೇಷನ್ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಲು ನೀವು ನಿಮ್ಮ ಮೊಬೈಲ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಗೂಗಲ್ ಸರ್ಚ್ ಇಂಜಿನ್ಗೆ ಭೇಟಿ ಕೊಡಬೇಕು. ಇದಾದ ನಂತರ ಕನ್ನಡ, ತೆಲುವು, ತಮಿಳು, ಹಿಂದಿ ಅಥವಾ ಇಂಗ್ಲಿಷ್ ಸೇರಿದಂತೆ ನಿಮ್ಮ ಭಾಷೆಯಲ್ಲೇ ಮಹಾಕುಂಭ ಎಂದು ಬರೆಯಿರಿ. ಈಗ ನೀವು ಸರ್ಚ್ ಮೇಲೆ ಕ್ಲಿಕ್ ಮಾಡಿದ ತಕ್ಷಣ, ಸರ್ಚ್ ರಿಸಲ್ಟ್ ಜೊತೆಗೆ ಗುಲಾಬಿ ದಳಗಳು ಬೀಳುವ ಅನಿಮೇಷನ್ ನೋಡಬಹುದು.
ಶೇರ್ ಮಾಡಬಹುದು: ಈ ಅನಿಮೇಷನ್ ಜೊತೆಗೆ ಸ್ಕ್ರೀನ್ನ ಕೆಳಭಾಗದಲ್ಲಿ ಮೂರು ಆಯ್ಕೆಗಳು ಸಹ ಕಾಣಿಸಿಕೊಳ್ಳುತ್ತಿವೆ. ಮೊದಲ ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಈ ಅನಿಮೇಷನ್ ಆಫ್ ಮಾಡಬಹುದು. ನೀವು ಇನ್ನೊಂದರ ಮೇಲೆ ಟ್ಯಾಪ್ ಮಾಡುತ್ತಲೇ ಇದ್ದಂತೆ, ಗುಲಾಬಿ ದಳಗಳ ಸಂಖ್ಯೆ ಏರುತ್ತಲೇ ಸಾಗುತ್ತದೆ. ಮೂರನೇ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಈ ಅನಿಮೇಷನ್ ಅನ್ನು ತಮ್ಮ ಸ್ನೇಹಿತ ಅಥವಾ ಕುಟುಂಬದವರೊಂದಿಗೆ ಶೇರ್ ಮಾಡಿಕೊಳ್ಳುವ ಅವಕಾಶವನ್ನು ಗೂಗಲ್ ಕಲ್ಪಿಸಿದೆ.
ಇದನ್ನೂ ಓದಿ: ಭಾರತಕ್ಕೆ ಬರ್ತಿದೆ ಎಂಜಿ ಮೋಟಾರ್ ಇಂಡಿಯಾದ ಲಕ್ಷುರಿ ಇವಿ ಕಾರು!
ಭಕ್ತರಿಗೆ ಸುವರ್ಣಾವಕಾಶ: ಉತ್ತರ ಪ್ರದೇಶ ಸರ್ಕಾರ ಮಹಾಕುಂಭ ಮೇಳಕ್ಕೆ ಆಗಮಿಸುವ ಜನರಿಗೆ ಒಂದು ಸುವರ್ಣಾವಕಾಶ ಕಲ್ಪಿಸಿದೆ. ಅದು ಕೇವಲ 1,296 ರೂಪಾಯಿಯಲ್ಲಿ ಹೆಲಿಕಾಪ್ಟರ್ ಪ್ರಯಾಣ. ಯುಪಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಜೈವೀರ್ ಸಿಂಗ್ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಿಕೆಟ್ ದರ ಕಡಿತ: ಈ ಮೊದಲು 3,000 ಸಾವಿರ ರೂಪಾಯಿ ಇದ್ದ ಹೆಲಿಕಾಪ್ಟರ್ ಪ್ರಯಾಣ ದರವನ್ನು ಇದೀಗ ಪ್ರಯಾಣಿಕರನ್ನು ಸೆಳೆಯಲು ಅರ್ಧಕ್ಕಿಂತ ಕಡಿಮೆ ಮಾಡಿದೆ. ಹೆಲಿಕಾಪ್ಟರ್ ಮೂಲಕ ನೀವು ಪ್ರಯಾಗ್‌ರಾಜ್ ನಗರದ ವೈಮಾನಿಕ ದೃಶ್ಯವನ್ನು 7ರಿಂದ 8 ನಿಮಿಷ ಕಾಲ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ: ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಲು ಬಯಸುವವರು www.upstdc.co.in ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಈ ಬಗ್ಗೆ ಯೋಜನೆಯ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸರ್ಕಾರದ ಪವನ್ ಹನ್ಸ್ ಮಾಹಿತಿ ನೀಡಿದ್ದಾರೆ. ಈ ಪ್ರಯಾಣ ನಿರಂತರವಾಗಿ ನಡೆಯಲಿದೆ. ಆದರೆ ಪ್ರತಿ ಬಾರಿ ಹವಾಮಾನವನ್ನು ಅವಲೋಕಿಸಿದ ಬಳಿಕ ಪ್ರಯಾಣವನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಈ ಮಹಾ ಸಮ್ಮೇಳನದ ಪ್ರದೇಶದಲ್ಲಿ ಜಲಸಾಹಸ ಕ್ರೀಡೆಗಳನ್ನೂ ಸಹ ನಡೆಸಲು ತಯಾರಿ ನಡೆದಿವೆ ಎಂದು ಯುಪಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಡಿಆರ್‌ಡಿಒ ದೇಶೀಯವಾಗಿ ಅಭಿವೃದ್ಧಿಪಡಿಸಿದ 'ನಾಗ್ ಎಂಕೆ2' ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ