ಮಂಗಳೂರು: ನಗರದಲ್ಲಿ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಪಣಂಬೂರು ಠಾಣೆಯಲ್ಲಿ ಎರಡು ತಂಡಗಳಿಂದ ದೂರು, ಪ್ರತಿದೂರು ದಾಖಲಾಗಿದೆ. ಮಂಗಳೂರು ಮೂಲದ ಮಂಗಳಮುಖಿಯರು ಮತ್ತು ಹೊರಜಿಲ್ಲೆಗಳಿಂದ ಮಂಗಳೂರಿಗೆ ಬಂದವರ ನಡುವೆ ವೈಮನಸ್ಯ ಮೂಡಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ನಗರದ ಬೈಕಂಪಾಡಿಯ ರೈಲ್ವೆ ಗೇಟ್ ಸಮೀಪ ಎರಡು ಗುಂಪಿನ ನಡುವೆ ಘರ್ಷಣೆ ನಡೆದು ಒಂದು ಗುಂಪು ಪಣಂಬೂರು ಠಾಣೆಯಲ್ಲಿ ದೂರು ನೀಡಿತ್ತು. ಇದೀಗ ಮತ್ತೊಂದು ಗುಂಪಿನವರು ಸಹ ಪ್ರತಿದೂರು ನೀಡಿದ್ದಾರೆ.
ಮಂಗಳೂರು ಮೂಲದ ಮಂಗಳಮುಖಿಯರು ಹೊರಜಿಲ್ಲೆಯಿಂದ ಬಂದಿರುವ ಮಂಗಳಮುಖಿಯರಿಗೆ ನಗರದಿಂದ ತೆರಳಬೇಕು ಎಂದು ಬೆದರಿಸಿದ್ದಾರೆ. ನಾವು ಇಲ್ಲೇ ಹುಟ್ಟಿ ಬೆಳೆದದ್ದು. ನಾವು ಇಲ್ಲಿ ಇರಬೇಕು. ನೀವು ಇಲ್ಲಿಂದ ವಾಪಸ್ ಹೋಗಬೇಕು. ನೀವಿರುವುದರಿಂದ ನಮಗೆ ಭಿಕ್ಷೆಯಲ್ಲಿ ಬರುವ ಆದಾಯ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ಗಂಗಾವತಿ, ಕೊಪ್ಪಳ, ಬಳ್ಳಾರಿಯಿಂದ ಸುಮಾರು ವರ್ಷಗಳ ಹಿಂದೆ ಬಂದು ಜೀವನ ನಡೆಸುತ್ತಿರುವ ಮಂಗಳಮುಖಿಯರು ಇಲ್ಲಿಂದ ಹೋಗಲು ಒಪ್ಪದಿದ್ದರಿಂದ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದೆ. ಈ ಬಗ್ಗೆ ಇಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರಿಗೆ ಎರಡು ಗುಂಪಿನವರು ಮನವಿ ನೀಡಲು ಬಂದಿದ್ದರು. ಈ ಸಂದರ್ಭದಲ್ಲಿಯೂ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಎರಡು ತಂಡಗಳ ಮನವಿಯನ್ನು ಪೊಲೀಸ್ ಕಮೀಷನರ್ ಶಶಿಕುಮಾರ್ ಆಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎರಡು ತಂಡಗಳು ನೀಡಿರುವ ದೂರಿನ ಬಗ್ಗೆ ಸತ್ಯಾಸತ್ಯಾತೆ ನೋಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಓದಿ: ಬೆಂಗಳೂರಲ್ಲಿ ಹಾಡಹಗಲೇ ಹರಿದ ನೆತ್ತರು.. ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಬರ್ಬರ ಕೊಲೆ..