ಮಂಗಳೂರು: ಮಂಗಳೂರು ಅಂತರರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಸಂದೇಶ ಬಂದಿದ್ದು, ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. xonocikonoci10@beeble.com ಎಂಬ ಐಡಿಯಿಂದ ಬೆದರಿಕೆ ಸಂದೇಶ ಸ್ವೀಕರಿಸಲಾಗಿತ್ತು.
ಇಮೇಲ್ನಲ್ಲಿ, ನಿಮ್ಮ ಒಂದು ವಿಮಾನದೊಳಗೆ ಸ್ಫೋಟಕಗಳಿವೆ. ಅವು ಕೆಲವೇ ಗಂಟೆಗಳಲ್ಲಿ ಸ್ಪೋಟಿಸಲಿವೆ. ನಿಮ್ಮನ್ನೆಲ್ಲ ಕೊಲ್ಲುತ್ತೇನೆ. ನಾವು "ಫನ್ನಿಂಗ್" ಎಂಬ ಭಯೋತ್ಪಾದಕ ಗುಂಪು ಎಂದು ಬರೆಯಲಾಗಿತ್ತು. ಇಮೇಲ್ ಸಂದೇಶವನ್ನು ಡಿಸೆಂಬರ್ 27ರಂದು ಬೆಳಿಗ್ಗೆ 11.20ಕ್ಕೆ ನಿಲ್ದಾಣದ ಅಧಿಕಾರಿಗಳು ಗಮನಿಸಿದ್ದಾರೆ.
ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿ, ಈ ಸಂದೇಶ ಪಡೆದ ನಂತರ ನಾವು ವಿಮಾನ ನಿಲ್ದಾಣದ ಆವರಣದ ಹೊರಗೆ ಭದ್ರತೆ ಬಿಗಿಗೊಳಿಸಿದ್ದೇವೆ. ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದೇವೆ. ಎಎಸ್‌ಸಿ ಮತ್ತು ಬಿಡಿಡಿಎಸ್ ಪರಿಶೀಲನೆಯನ್ನು ತಕ್ಷಣವೇ ನಡೆಸಿದ್ದೇವೆ. ಬಜ್ಪೆ ಪೊಲೀಸ್ ಇನ್ಸ್ಪೆಕ್ಟರ್ ಉಪಸ್ಥಿತಿಯಲ್ಲಿ ನಿಲ್ದಾಣದ ಅಧಿಕಾರಿಗಳೊಂದಿಗೆ ಸಮನ್ವಯ ಸಭೆಯೂ ನಡೆಸಲಾಯಿತು. ನಿಲ್ದಾಣದ ಅಧಿಕಾರಿಗಳ (ಅದಾನಿ) ದೂರಿನ ಮೇರೆಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಅಪರಾಧ ಸಂಖ್ಯೆ 210/23 u/s 507 IPC ಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
ಇತ್ತೀಚಿನ ಪ್ರಕರಣ-ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಕೆಲ ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಎಕ್ಸ್ ಖಾತೆಯಲ್ಲಿ, ನಾನು ಬೆಂಗಳೂರು ಏರ್ ಪೋರ್ಟ್ಗೆ ಬಾಂಬ್ ಹಾಕುತ್ತೇನೆ ಎಂದು ಇಂಗ್ಲಿಷ್‌ನಲ್ಲಿ ಪೋಸ್ಟ್ ಮಾಡಿ, ವಿಮಾನ ನಿಲ್ದಾಣದ ಅಧಿಕೃತ ಎಕ್ಸ್ ಖಾತೆಗೂ ಇದನ್ನು ಟ್ಯಾಗ್ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಆರ್‌ಬಿಐ ಮುಂಬೈ ಕಚೇರಿ, ಖಾಸಗಿ ಬ್ಯಾಂಕ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್