ಮಂಗಳೂರು: ಜನವರಿ ತಿಂಗಳಾಂತ್ಯದ ಮಕರ ಸಂಕ್ರಮಣ ಕಳೆದ ವಾರದೊಳಗೆ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ ಎಂದು ಮಂದಿರ ನಿರ್ಮಾಣ ಸಮಿತಿಯ ಸದಸ್ಯ ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ, ಉದ್ಘಾಟನೆ ದಿನ ಶೀಘ್ರದಲ್ಲೇ ನಿಗದಿಯಾಗಲಿದೆ ಎಂದು ತಿಳಿಸಿದರು.
ಶ್ರೀರಾಮ ಮಂದಿರದಲ್ಲಿ ಸೇವೆಯ ಪಟ್ಟಿ ಇರುವುದಿಲ್ಲ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಇತರ ದೇವಸ್ಥಾನಗಳಂತೆ ಸೇವೆಯ ಪಟ್ಟಿ ಇರುವುದಿಲ್ಲ. ಸಾಮಾನ್ಯವಾಗಿ ಭಕ್ತರು ದೇವಸ್ಥಾನಗಳಿಗೆ ಹೋದಾಗ ಅಲ್ಲಿನ ಸೇವೆಗಳ ಪಟ್ಟಿಯನ್ನು ನೋಡಿ ಸೇವೆ ಸಲ್ಲಿಸುತ್ತಾರೆ. ಆದರೆ ಈ ರೀತಿಯ ವ್ಯವಸ್ಥೆ ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಇರುವುದಿಲ್ಲ. ದೇವರಿಗೆ ಕಾಣಿಕೆ ಸಮರ್ಪಿಸುವವರು ರಾಮ ರಾಜ್ಯದ ಕನಸು ನನಸುಗೊಳಿಸುವುದಕ್ಕೆ ನೀಡುವ ಕಾಣಿಕೆ ಆಗಿದೆ. ಬದುಕಿನಲ್ಲಿ ಒಬ್ಬನಿಗೆ 10 ಲಕ್ಷ ರೂ ಖರ್ಚು ಮಾಡುವ ಸಾಮರ್ಥ್ಯ ಇದ್ದರೆ, ವಾಸಕ್ಕೆ ಮನೆ ಇಲ್ಲದವನಿಗೆ ಮನೆ ನಿರ್ಮಾಣ ಮಾಡಿ ಕೊಡುವುದು, ಆರೋಗ್ಯ, ಶಿಕ್ಷಣದಂತಹ ಕೊಡುಗೆಗಳನ್ನು ಆತನ ಸಂಪತ್ತಿಗೆ ತಕ್ಕಂತೆ ನೀಡಿ ರಾಮ ರಾಜ್ಯದ ಕನಸು ನನಸು ಮಾಡಿದರೆ ಅದುವೇ ಅವರು ನೀಡುವ ಸೇವೆ ಎಂದರು.
ರಾಮ ಸೇವೆಯೇ ದೇಶ ಸೇವೆ: ಶ್ರೀರಾಮ ಮಂದಿರದಲ್ಲಿ ಯಾವುದೇ ಸೇವೆಯು ಭಕ್ತರಿಗೆ ಇರದೇ ಇದ್ದರೂ ಭಕ್ತರೂ ತಮ್ಮ ಇಷ್ಟಾನುಸಾರ ಕಾಣಿಕೆಗಳನ್ನು ಕಾಣಿಕೆ ಡಬ್ಬಿಗೆ ಹಾಕಬಹುದು ಎಂದರು. ಇನ್ನು, ಮಂದಿರ ವಿಚಾರದಲ್ಲಿ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅದಕ್ಕೂ ನನಗೂ ಸಂಬಂಧ ಇಲ್ಲ. ರಾಮ ಸೇವೆ ಮಾಡುವುದೇ ದೇಶ ಸೇವೆ. ಯಾರೂ ಏನೂ ಬೇಕಾದರೂ ಮಾಡಲಿ ಎಂದು ಹೇಳಿದರು.
ಗೋಹತ್ಯೆಯನ್ನು ಪೊಲೀಸರ ಮೂಲಕ ಹಿಂದೂ ಸಂಘಟನೆಗಳು ತಡೆಯಬೇಕು: ಭಾರತದ ನೆಲದಲ್ಲಿ ಗೋ ಹತ್ಯೆ ನಡೆಯಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ. ಸರ್ಕಾರ ಗೋ ಹತ್ಯೆ ನಿಷೇಧ ಕಾನೂನು ಹಿಂಪಡೆಯುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಹಿಂದೂ ಸಂಘಟನೆಗಳು ಗೋ ಹತ್ಯೆಯನ್ನು ತಡೆಯಬೇಕು. ನೇರವಾಗಿ ಧುಮುಕದೇ ಪೊಲೀಸ್ ಇಲಾಖೆಯ ಮೂಲಕ ತಡೆಗಟ್ಟಲು ಪ್ರಯತ್ನಿಸಬೇಕು ಎಂದು ಕರೆ ಕೊಟ್ಟರು.
ಜು.3 ರಿಂದ ಚಾತುರ್ಮಾಸ್ಯ: ಮಳೆಗಾಲದ ಸಂದರ್ಭದಲ್ಲಿ ಯತಿಗಳು ಚಾತುರ್ಮಾಸ್ಯ ಆಚರಿಸಬೇಕೆಂದು ನಿಯಮವಿದೆ. ಚಾತುರ್ಮಾಸ್ಯ ಸಂದರ್ಭದಲ್ಲಿ ಹೊರಗಡೆ ಸಂಚಾರ ನಿಷೇಧವಿದೆ. ಅದರಂತೆ ಜು. 3ರಿಂದ ಮೈಸೂರಿನಲ್ಲಿ ಚಾತುರ್ಮಾಸ್ಯ ಆಚರಿಸಲಿದ್ದೇನೆ. ನಾಲ್ಕು ತಿಂಗಳು ಚಾತುರ್ಮಾಸ್ಯ ಆಚರಿಸಲಿದ್ದೇನೆ ಎಂದು ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.