ಚಿತ್ರದುರ್ಗ: ಮುಸ್ಲಿಂಮರ ಪವಿತ್ರ ರಂಜಾನ್ ಮಾಸ ಇದೇ ತಿಂಗಳು 24ರಿಂದ ಆರಂಭವಾಗಲಿದ್ದು, ಕೊರೊನಾ ತಡೆಗಟ್ಟುವ ಸಲುವಾಗಿ ನಮಾಜ್ನ್ನ ತಮ್ಮ ಮನೆಗಳಲ್ಲಿಯೇ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮನವಿ ಮಾಡಿದ್ದಾರೆ.
ರಂಜಾನ್ ಮಾಸದ ಪ್ರಯುಕ್ತ ಮುಸ್ಲಿಮರು ದಿನದಲ್ಲಿ ಐದು ಬಾರಿ ನಮಾಜ್ ಮಾಡುವುದು ವಾಡಿಕೆ. ನಮಾಜ್ ಸೇರಿದಂತೆ ಪ್ರತಿದಿನ ರಾತ್ರಿ 8 ಗಂಟೆಗೆ ಆಚರಿಸುವ ತರಾವ್ಹಿಅನ್ನು ತಮ್ಮ ಮನೆಯಲ್ಲಿಯೇ ಮಾಡಿಕೊಳ್ಳಬೇಕು. ಮಸೀದಿಗಳಲ್ಲಿ ಮೌಲ್ವಿ ಹಾಗೂ ಮಸೀದಿ ನೋಡಿಕೊಳ್ಳುವ ಸಿಬ್ಬಂದಿ ಮಾತ್ರ ಸಾರ್ವಜನಿಕ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ವಕ್ಫ್ ಆ್ಯಕ್ಟ್ 1995ರ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಯಾವುದೇ ಪ್ರವಚನಗಳನ್ನ ಆಯೋಜಿಸುವಂತಿಲ್ಲ ಹಾಗೂ ಜಿಲ್ಲೆಯಲ್ಲಿ ಯಾವುದೇ ಇಫ್ತಾರ್ ಮತ್ತು ಸಾಮೂಹಿಕ ಭೋಜನ ಕೂಟ ಆಯೋಜಿಸುವಂತಿಲ್ಲ ಎಂದು ಆದೇಶಿಸಿದ್ದಾರೆ.