ಚಿಕ್ಕಮಗಳೂರು : ಹೊಟ್ಟೆ ನೋವಿನಿಂದ ಬಳಲುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಅವರಿಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಿಡ್ನಿ ಸ್ಟೋನ್‌ನಿಂದ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಿನ್ನೆ (ಶನಿವಾರ) ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಸಿ.ಟಿ.ರವಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಬಿಜೆಪಿ ಕಚೇರಿಯಿಂದ ತೆರಳಿ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿಯಲ್ಲಿ 12 ಎಂ.ಎಂ. ಗಾತ್ರದ ಕಲ್ಲು ಇರುವುದಾಗಿ ವೈದ್ಯರು ತಿಳಿಸಿದ್ದಾರೆ. ಸ್ಟಂಟ್ ಮೂಲಕ ಕಲ್ಲುಗಳ ರವಾನೆ ಮಾಡಲಾಗುತ್ತಿದೆ. ಇಂದು ಒಂದು ದಿನ ವಿಶ್ರಾಂತಿಯಲ್ಲಿರಲು ವೈದ್ಯರು ಸೂಚನೆ ನೀಡಿದ್ದು, ರಾತ್ರಿ 10 ಗಂಟೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಿ.ಟಿ.ರವಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಸಮಾವೇಶಕ್ಕೆ ಸಿ.ಟಿ ರವಿ ಗೈರು, ಪತ್ನಿ ಹಾಜರು: ಇಂದು ಚಿಕ್ಕಮಗಳೂರಿನಲ್ಲಿ ನಡೆದ ವೀರಶೈವ ಸಮಾವೇಶದಲ್ಲಿ ಸಿ.ಟಿ.ರವಿ ಪಾಲ್ಗೊಳ್ಳಬೇಕಿತ್ತು. ಅದರೆ ಪತ್ನಿ ಪಲ್ಲವಿ ರವಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಪಲ್ಲವಿ ರವಿ ಮಾತನಾಡಿ, ಸಿ.ಟಿ.ರವಿ ಅವರಿಗೆ ಕಿಡ್ನಿ ಸ್ಟೋನ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೇದಿಕೆಯಲ್ಲಿ ಹೇಳುತ್ತಾ ಭಾವುಕರಾದರು.
ಇದನ್ನೂ ಓದಿ : ಯಾರು ಬೇಕಾದ್ರೂ ಸಿಎಂ ಆಗಿ, ನನಗೆ ಬೇಕಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಷ್ಟೇ: ಖರ್ಗೆ
ಸಮಾವೇಶಕ್ಕೆ ಸಿ.ಟಿ.ರವಿ ಅವರನ್ನು ಐದು ನಿಮಿಷ ಕಳಿಸಿಕೊಡಿ ಎಂದು ವೈದ್ಯರಿಗೆ ಮನವಿ ಮಾಡಿದ್ದೆ. ಆದರೆ, ಇನ್ಫೆಕ್ಷನ್ ಆಗುತ್ತೆ ಬೇಡ ಎಂದು ಹೇಳಿದರು. ವೀರಶೈವ ಲಿಂಗಾಯತ ಸಮಾಜ ಒಂದು ಸಮಾಜ ಅಲ್ಲ. ಅದೊಂದು ಶಕ್ತಿ. ದೇಶದ ಉದ್ಧಗಲಕ್ಕೂ ತನ್ನದೇ ಆದ ಛಾಪು ಮೂಡಿಸಿರುವ ಸಹೃದಯಿ ಸಮುದಾಯ. ಸಮಾವೇಶಕ್ಕೆ ಸಿ.ಟಿ.ರವಿ ಅವರು ಬರಲಾಗಿಲ್ಲ, ಅದಕ್ಕೆ ಕ್ಷಮೆ ಕೇಳುತ್ತೇನೆ. ನಿಮ್ಮ ಪ್ರೀತಿಯ ಮಗನಿಗೆ ಮತ ಹಾಕಿ ಉನ್ನತ ಸ್ಥಾನಕ್ಕೇರಿಸಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಪಲ್ಲವಿ ರವಿ ಹೇಳಿದರು. ಸಿ.ಟಿ.ರವಿ ಅವರ ದಿನಚರಿ ಬೆಳಗ್ಗೆ 4.30ಕ್ಕೆ ಆರಂಭವಾಗಿ ರಾತ್ರಿ 12ಕ್ಕೆ ಮುಗಿಯುತ್ತದೆ. ನಾನು ಅವರನ್ನು ನೋಡೋದೇ ತಿಂಗಳಿಗೆ 2-3 ಬಾರಿ ಅಷ್ಟೇ ಎಂದು ಇದೇ ವೇಳೆ ಪಲ್ಲವಿ ರವಿ ಹೇಳಿದರು.
ಇದನ್ನೂ ಓದಿ : ಶೆಟ್ಟರ್, ಸವದಿಯಂತಹ ಹತ್ತು ನಾಯಕರನ್ನು ಸೃಷ್ಟಿಸುವ ಶಕ್ತಿ ಬಿಜೆಪಿಗಿದೆ: ರಮೇಶ್ ಜಾರಕಿಹೊಳಿ