ಚಿಕ್ಕಮಗಳೂರು : ಜಿಲ್ಲೆಯ ಕಡೂರು ಪಟ್ಟಣದ ಅರಿವಿನ ಮನೆ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ, ಹಾಗೂ ಆರ್ ಎಸ್ ಎಸ್ ಮುಖಂಡರಾದ ಡಾ. ಶಶಿಧರ ಚಿಂದಿಗೆರೆ ಜಯಣ್ಣ ಅವರ ಕಾರಿನ ಮೇಲೆ ಕೊಲೆ ಬೆದರಿಕೆ ಸಂದೇಶ ಬರೆದಿರುವುದು ಪತ್ತೆಯಾಗಿದೆ.
ಶನಿವಾರ ರಾತ್ರಿ ಕಡೂರಿನ ಲಕ್ಷ್ಮೀಶ ನಗರದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಕೆಲ ದುಷ್ಕರ್ಮಿಗಳು ಕೊಲೆ ಬೆದರಿಕೆ ಸಂದೇಶ ಬರೆದು ಕೆಲ ಅಶ್ಲೀಲ ಪದಗಳನ್ನು ಬರೆದಿದ್ದಾರೆ. ಜೊತೆಗೆ ಜಿಹಾದ್ ಎಂದು ಬರೆಯಲಾಗಿದ್ದು, ಕಾರಿನ ನಾಲ್ಕೂ ಚಕ್ರದ ಗಾಳಿಯನ್ನು ತೆಗೆದಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಡಾ ಶಶಿಧರ್, ಚಿಕ್ಕಮಗಳೂರು ಜಿಲ್ಲೆಯ ಆರ್ಎಸ್ಎಸ್ ಧರ್ಮ ಜಾಗರಣ ಗತಿವಿಧಿ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಡಾ.ಶಶಿಧರ್, ಹಲವು ಕಡೆ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸಹಜವಾಗಿಯೇ ಜಾಗ್ರತೆ ವಹಿಸುವುದು ಕ್ಷೇಮ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ಸಲ್ಲಿಸಿದ್ದೇನೆ. ಕಡೂರಿನಲ್ಲಿ ಅದರಲ್ಲೂ ಜನನಿಬಿಡ ಪ್ರದೇಶದಲ್ಲಿ ಈ ರೀತಿಯ ಬೆದರಿಕೆ ಸಂದೇಶ ಬರೆದಿರುವುದಕ್ಕೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಕೋರಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಸಂಘ ಪರಿವಾರದವರ ಮನೆಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ.. 18 ಜನರ ಬಂಧನ