ಚಿಕ್ಕಮಗಳೂರು: ಮಳೆ ಅವಾಂತರ ಮುಂದುವರೆದಿದೆ. ತೋಟದಲ್ಲಿ ಕೆಲಸ ಮಾಡುವ ವೇಳೆ ಮರ ಬಿದ್ದು ಯುವತಿ ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಹೊರನಾಡು ಸಮೀಪದ ತೋಟದಲ್ಲಿ ನಡೆದಿದೆ. ದಾವಣಗೆರೆಯ ಹರಪನಹಳ್ಳಿ ಮೂಲದ ಪ್ರಿಯಾ (20) ಮೃತ ಯುವತಿ. ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಮಳೆಯ ಅವಾಂತರಕ್ಕೆ ಜಿಲ್ಲೆಯಲ್ಲಿ ಈವರೆಗೆ ಮೃತರ ಸಂಖ್ಯೆ 2ಕ್ಕೆ ಏರಿದೆ.
ಇನ್ನೆರಡು ದಿನ ರಜೆ: ಮಲೆನಾಡು ಭಾಗ ಹಾಗೂ ಬಯಲು ಸೀಮೆ ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕು, ಮೂಡಿಗೆರೆ, ಕಳಸ, ಎನ್.ಆರ್ ಪುರ, ಕೊಪ್ಪ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಈ ಹಿಂದೆ 4 ದಿನ ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶಿಸಿತ್ತು. ಇದೀಗ ರಜೆಯನ್ನು ಇನ್ನೆರಡು ದಿನ ಅಂದ್ರೆ ಜುಲೈ 11, 12ಕ್ಕೆ ವಿಸ್ತರಿಸಿದೆ.
6 ತಾಲೂಕಿನ ಶಾಲೆಗಳಿಗೆ ರಜೆ ಸೋಮವಾರ, ಮಂಗಳವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ. ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಕ್ಕಳು ಶಾಲೆಗೆ ಹೋಗಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಜನ ಜೀವನ ಅಸ್ತವ್ಯಸ್ತವಾಗಿದೆ.
(ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ: ಕರಾವಳಿ ಜಿಲ್ಲೆಗಳಿಗೆ ಜುಲೈ 12ರವರೆಗೆ 'ರೆಡ್ ಅಲರ್ಟ್')