ಚಿಕ್ಕಮಗಳೂರು : ದಲಿತ ಚಾಲಕನೊಬ್ಬನನ್ನು ಜಾತಿಯಿಂದ ನಿಂದಿಸಿ ಆತನ ಮೇಲೆ ಹಲ್ಲೆ ಮಾಡಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರು ಮರಡಿ ಗ್ರಾಮದ ಗೊಲ್ಲರ ಹಟ್ಟಿಯಲ್ಲಿ ಕೇಳಿ ಬಂದಿದೆ. ಈ ಕೃತ್ಯವನ್ನು ಖಂಡಿಸಿರುವ ದಲಿತ ಸಂಘಟನೆಗಳು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ಗೊಳಗಾದ ಜೆಸಿಬಿ ಡ್ರೈವರ್ ಮಾರುತಿ ಎಂಬುವವನನ್ನು ತರೀಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಜ.1 ರಂದು ಸವರ್ಣೀಯರ ಬಡಾವಣೆಯಲ್ಲಿ ಜೆಸಿಬಿ ಮೂಲಕ ಮನೆ ಕೆಡವುವ ಕೆಲಸ ಮಾಡುವ ವೇಳೆ ಇನ್ನೊಂದು ಸಮುದಾಯವರು ಬಂದು ನನ್ನ ಜಾತಿ ಯಾವುದು ಎಂದು ಕೇಳಿದರು. ನಾನು ದಲಿತ ಜಾತಿ ಎಂದು ಗೊತ್ತಾದ ಮೇಲೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಗ್ರಾಮಕ್ಕೆ ಬಂದಿದ್ದಕ್ಕೆ ದಂಡವನ್ನೂ ವಸೂಲಿ ಮಾಡಿದ್ದಾರೆ ಎಂದು ಚಾಲಕ ಮಾರುತಿ ದೂರಿದ್ದಾರೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಗ್ರಾಮದಲ್ಲಿ ಡಿಎಸ್ಎಸ್ ಸಂಘಟನೆಯವರು ಪ್ರತಿಭಟನೆ ಮಾಡಿ ಪಟ್ಟು ಹಿಡಿದಿದ್ದರು. ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ದಲಿತ ಸಂಘಟನೆ ಕಾರ್ಯಕರ್ತರು ಊರಿನ ತುಂಬಾ ಮೆರವಣಿಗೆ ಮಾಡಿ ಗೊಲ್ಲರಹಟ್ಟಿಯ ಎಲ್ಲ ಕಡೆ ಓಡಾಡಿದ್ದರು. ಇನ್ನೊಂದೆಡೆ ಕೆಲ ದಲಿತ ಯುವಕರು ದೇವಸ್ಥಾನಕ್ಕೆ ಹೋಗುವುದಕ್ಕೆ ಮುಂದಾದರು. ಈ ವೇಳೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಮಧ್ಯ ಪ್ರವೇಶಿಸಿದ ತಹಶೀಲ್ದಾರ್ ಮತ್ತು ತರೀಕೆರೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ಕುರಿತು ತರೀಕೆರೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ಕೂಡ ದಾಖಲಿಸಲಾಗಿದೆ.
ಇದನ್ನೂ ಓದಿ : ಬೆಳಗಾವಿ: ಪ್ರೇಮ ಪ್ರಕರಣ ಸಂಬಂಧ ಕಲ್ಲು ತೂರಾಟ; ಸಂತ್ರಸ್ತರ ಮನೆಗೆ ಹೆಬ್ಬಾಳ್ಕರ್ ಭೇಟಿ