ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಶ್ವತ್ಥನಾರಾಯಣರೆಡ್ಡಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ನಾಗರಾಜ್ ಆಯ್ಕೆಯಾಗಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದುಕೊಂಡಿದೆ.
ಗೌರಿಬಿದನೂರುನಲ್ಲಿ ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‍ನ ಅಶ್ವತ್ಥನಾರಾಯಣ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ನಾಗರಾಜ್ ಆಯ್ಕೆಯಾಗಿದ್ದು, ಆಯ್ಕೆಯಾದವರಿಗೆ ಶಾಸಕ ಶಿವಶಂಕರರೆಡ್ಡಿ ಶುಭಕೋರಿದರು.
ಗೌರಿಬಿದನೂರು ಎಪಿಎಂಸಿಯಲ್ಲಿ ಒಟ್ಟು 14 ಜನರ ಸದಸ್ಯ ಸ್ಥಾನವಿದ್ದು, ಕಾಂಗ್ರೆಸ್ 11, ಬಿಜೆಪಿ 5 ಹಾಗೂ ಜೆಡಿಎಸ್ 1 ಸ್ಥಾನವಿತ್ತು. ಇದರಲ್ಲಿ ಕಾಂಗ್ರೆಸ್‍ನ ಓರ್ವ ಸದಸ್ಯ ಶ್ರೀಕರ್ ಸಭೆಗೆ ಗೈರು ಹಾಜರಾಗಿದ್ದರಿಂದ ಒಟ್ಟು 16ಜನ ಚುನಾವಣೆಯಲ್ಲಿ ಮತ ಚಲಾಯಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಶ್ವತ್ಥನಾರಾಯಣರೆಡ್ಡಿ ಅವರಿಗೆ 9 ಹಾಗೂ ಅವರ ಸಮೀಪದ ಪ್ರತಿ ಸ್ಪರ್ಧಿ ಶಂಕರಪ್ಪ 7 ಮತಗಳನ್ನು ಪಡೆದಿದ್ದರಿಂದ ಅಶ್ವತ್ಥನಾರಾಯಣರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾದರು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ನಾಗರಾಜು 10 ಮತಗಳನ್ನು ಪಡೆದರೆ ಬಿಜೆಪಿಯ ಅಶೋಕ್ 6 ಮತಗಳನ್ನು ಪಡೆದರು ಕಾಂಗ್ರೆಸ್ ನಾಗರಾಜು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಗೆದ್ದವರನ್ನು ಅಭಿನಂದಿಸಿದ ಶಾಸಕ ಶಿವಶಂಕರರೆಡ್ಡಿ ಮಾತನಾಡಿ, ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ನನಗಿತ್ತು. ಆದರೆ ಬಿಜೆಪಿ ಪಕ್ಷದವರು ಆಪರೇಷನ್ ಕಮಲ ಮಾಡಿದರೂ ಅವರು ಸೋತಿದ್ದಾರೆ ಎಂದರು.
ಬಿಜೆಪಿ ಪಕ್ಷದವರು ಆಪರೇಷನ್ ಕಮಲ ಮಾಡುವಲ್ಲಿ ಸದಾ ಮುಂದು ಅವರು ಯಾವಾಗಲೂ ಹಿಂಬಾಗಿಲಿನಿಂದ ಬರುವುದು ರೂಢಿ. ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ 4 ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರೂ ಅವರು ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಬಂದರು ಎಂದು ವ್ಯಂಗ್ಯವಾಡಿದರು.