ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಕೋಟ್ಯಾಂತರ ವಹಿವಾಟನ್ನು ತಂದು ಕೊಡುತ್ತಿರುವ ಚಿಂತಾಮಣಿ ನಗರದಲ್ಲಿ ಬೀದಿ ದೀಪಗಳು ಹಾಗೂ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ನಗರಸಭೆ ಈ ಸಮಸ್ಯೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಅಲ್ಲದೇ, ಕೆಲವು ವಾರ್ಡುಗಳಿಗೆ ಕಳೆದ ನಾಲ್ಕು ತಿಂಗಳುಗಳಿಂದ ಹನಿ ನೀರನ್ನು ಬಿಟ್ಟಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ನಗರಸಭೆ ಮುಂದೆ ಪ್ರತಿಭಟನೆ ಮಾಡಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಜೊತೆಗೆ, ನಗರದ ಎಲ್ಲಾ ವಾರ್ಡುಗಳಿಗೆ ಟ್ಯಾಂಕರ್ ಮೂಲಕ ಪ್ರತಿ ಮನೆಗೆ ಪ್ರತಿದಿನ ಹತ್ತು ಬಿಂದಿಗೆ ನೀರನ್ನು ಕೊಡಬೇಕು ಹಾಗೂ ನಗರದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಪದಾಧಿಕಾರಿಗಳು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಎನ್ . ಶಿವಕುಮಾರ್ ಉಪಾಧ್ಯಕ್ಷ ವೆಂಕಟೇಶ್, ಆರ್.ಇಲಿಯಾಸ್ ಖಾನ್, ನಾಗರಾಜ್, ಯೂನಿಸ್ ಖಾನ್, ನಾಗರಾಜ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.