ಬಾಗೇಪಲ್ಲಿ: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿನ ಚರಂಡಿ ನೀರು ಹರಿದು ಚಿತ್ರಾವತಿ ಕಣಜದ ನದಿ ಪಾತ್ರದ ಗುಂಡಿಗಳಲ್ಲಿ ಸಂಗ್ರಹಣೆ ಆಗುತ್ತಿದೆ. ಇದರಿಂದ ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇದೆ. ಆದರೂ ಪುರಸಭೆ ಆರೋಗ್ಯ ಅಧಿಕಾರಿ, ಪರಿಸರ ಎಂಜಿನಿಯರ್‌ಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಟ್ಟಣದ ನಿವಾಸಿಗಳು ಆರೋಪಿಸಿದ್ದಾರೆ.
ಪಟ್ಟಣದಲ್ಲಿ 23 ವಾರ್ಡ್‌ಗಳು ಇವೆ. ಒಂದು ವಾರದಿಂದ ಪ್ರತಿನಿತ್ಯ ಮಳೆ ಆಗುತ್ತಿದ್ದು, ಕೆಲವೆಡೆ ಚರಂಡಿ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಚರಂಡಿಗಳನ್ನು ಸ್ವಚ್ಛ ಮಾಡದೇ ಇರುವುದರಿಂದ ಕಸ-ಕಡ್ಡಿ, ಪ್ಲಾಸ್ಟಿಕ್ ತುಂಬಿಕೊಂಡು ಹೂಳು ಶೇಖರಣೆ ಆಗಿದೆ. ಜೊತೆಗೆ ಕಳೆಗಿಡಗಳು ಬೆಳೆದಿದೆ. ಪುರಸಭೆ ಎಂಜಿನಿಯರ್‌ಗಳು ಅವೈಜ್ಞಾನಿಕ, ಕಳಪೆ ಮಟ್ಟದ ಚರಂಡಿ ನಿರ್ಮಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾಲೂಕಿನ ಕೊಂಡಂವಾರಿಪಲ್ಲಿ ಗ್ರಾಮದ ಕೆರೆಯಲ್ಲಿ ತುಂಬಿದ ನೀರು, ಸಂತೆ ಮೈದಾನದ ಮೂಲಕ ಕೊರ್ಲಕುಂಟೆ ಕೆರೆಗೆ ಹರಿಸಲು ರಾಜಕಾಲುವೆ ಇದೆ. ರಾಜಕಾಲುವೆ ಸ್ವಚ್ಛತೆಗಾಗಿ ಕೋಟ್ಯಾಂತರ ಹಣ ವ್ಯಯ ಮಾಡಿದರೂ ಕೂಡಾ ರಾಜಕಾಲುವೆಯಲ್ಲಿ ಸ್ವಚ್ಛತೆ ಇಲ್ಲ. ಚರಂಡಿ ನೀರು ಮಾತ್ರ ಹರಿಯದೇ ನಿಂತಲ್ಲೇ ಶೇಖರಣೆಯಾಗುತ್ತಿದೆ.
ಪಟ್ಟಣದ ವಾಲ್ಮೀಕಿ ನಗರದ ಬಳಿ ಮಿನಿ ಕ್ರೀಡಾಂಗಣ ಇದೆ, ಅಕ್ಕಪಕ್ಕದಲ್ಲಿ ಹರಿಯುವ ನೀರನ್ನು ಹರಿಸಲು ಚರಂಡಿ ನಿರ್ಮಿಸಲಾಗಿದೆ. ಇದರ ಮೂಲಕ ಅಂಬೇಡ್ಕರ್ ನಗರ, ಕುಂಬಾರಪೇಟೆ ರಸ್ತೆ, ಗಂಗಮ್ಮ ಗುಡಿ ರಸ್ತೆ ಹಾಗೂ ಸ್ಮಶಾನ ರಸ್ತೆ ಮೂಲಕ ಚಿತ್ರಾವತಿ ಕಣಜದ ಗುಂಡಿಗಳಿಗೆ ಚರಂಡಿ ನೀರು ಹರಿಯುತ್ತಿದೆ. ಪುರಸಭೆಯ ವ್ಯಾಪ್ತಿಯಲ್ಲಿ ಚರಂಡಿ, ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಕೊರೊನಾ ಭೀತಿ ನಡುವೆ ಅಸ್ವಚ್ಛ ವಾತಾವರಣದಲ್ಲಿ ವಾಸಿಸಲು ಆಗುತ್ತಿಲ್ಲ ಎಂದು ಪಟ್ಟಣದ ಹಿರಿಯ ನಾಗರಿಕ ಕಾರಕೂರಪ್ಪ ಹೇಳಿದರು.
ಸಮಸ್ಯೆಗೆ ಪರಿಹಾರ ಕಲ್ಪಿಸಿ: ಅಧಿಕಾರಿಗಳು ಕೇವಲ ಕಚೇರಿ, ಕಡತಗಳಿಗೆ ಸೀಮಿತವಾಗಬಾರದು. ವಾರ್ಡ್‌ಗಳ ಸ್ವಚ್ಛತೆ, ಕಸ ವಿಲೇವಾರಿ, ಬೀದಿ ದೀಪದಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಕೋವಿಡ್-19 ಸೋಂಕಿನ ಕರ್ತವ್ಯದಲ್ಲಿ ಇರುವ ಅಧಿಕಾರಿಗಳು ಪಟ್ಟಣದ ಸ್ವಚ್ಛತೆಗೆ ಗಮನ ಹರಿಸಬೇಕು. ಪಟ್ಟಣದಲ್ಲಿ ಪರಿಸರ ಅಭಿವೃದ್ಧಿಪಡಿಸಬೇಕಾದ ಪರಿಸರ ಎಂಜಿನಿಯರ್ ಇದ್ದರೂ ಸಹ ಸ್ವಚ್ಛತೆ ಮಾತ್ರ ಮರೀಚಿಕೆ ಆಗಿದೆ ಎಂದು ಪಟ್ಟಣದ ನಿವಾಸಿ ಈಶ್ವರಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.